ಬೆಂಗಳೂರು: ಸೇಫ್ ಸಿಟಿ ಯೋಜನೆಗೆ ಸಂಬಂಧಪಡದಿರುವ ವ್ಯಕ್ತಿಗಳು ಗೃಹ ಇಲಾಖೆ ಕಾರ್ಯದರ್ಶಿ ಹೆಸರಲ್ಲಿ ಟೆಂಡರ್ ಮಾಹಿತಿ ಪಡೆಯಲು ಯತ್ನಿಸಿರುವ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಕಮಲ್ ಪಂತ್ರನ್ನು ತನಿಖಾಧಿಕಾರಿಯಾಗಿ ನೇಮಿಸಿ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.
ನಿರ್ಭಯಾ ಯೋಜನೆಯಡಿ ನಗರದಲ್ಲಿ 610 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಸಿಟಿವಿ ಅಳವಡಿಕೆ ಸಂಬಂಧ ಕರೆಯಲಾದ ಗುತ್ತಿಗೆ ವಿಚಾರದಲ್ಲಿ ಟೆಂಡರ್ ಮಾಹಿತಿ ಪಡೆಯಲು ಗೃಹ ಇಲಾಖೆ ಕಾರ್ಯದರ್ಶಿ ಹೆಸರಲ್ಲಿ ಕರೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಗೃಹ ಕಾರ್ಯದರ್ಶಿ ಡಿ. ರೂಪಾ ಹೆಸರು ದುರ್ಬಳಕೆ ಮಾಡಿಕೊಂಡು ಗುತ್ತಿಗೆ ಪಡೆಯಲು ಪ್ರಭಾವ ಬೀರಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಸಂಬಂಧ ಇದೀಗ ಒಳಾಡಳಿತ ಇಲಾಖೆ ತನಿಖೆ ನಡೆಸುವಂತೆ ಆದೇಶ ನೀಡಿದೆ.
ಓದಿ: ನಿರ್ಭಯಾ ಯೋಜನೆಯ ಟೆಂಡರ್ ಲೋಪ; ಮಹಿಳಾ IPS ಅಧಿಕಾರಿ ಡಿ.ರೂಪಾ ಅವರ ಹೆಸರು ದುರ್ಬಳಕೆ
ಈ ಸಂಬಂಧ ತನಿಖೆ ನಡೆಸುವಂತೆ ಬೆಂಗಳೂರು ಅಪರ ಪೊಲೀಸ್ ಆಯುಕ್ತರು(ಆಡಳಿತ) ನವೆಂಬರ್ 11 ರಂದು ಪತ್ರ ಬರೆದು ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಯವರಲ್ಲಿ ಕೋರಿದ್ದರು. ಈ ಹಿನ್ನೆಲೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.