ಬೆಂಗಳೂರು: ಕೊನೆಗೂ ಮೈತ್ರಿ ಸರ್ಕಾರ ಜಿಂದಾಲ್ ಗೆ 3667 ಎಕರೆ ಭೂಮಿ ಮಾರಾಟ ಮಾಡುವ ಸಂಪುಟದ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಳ್ಳಲು ನಿರ್ಧರಿಸಿದೆ, ಬಿಜೆಪಿಯ ಪ್ರಬಲ ವಿರೋಧ ಮತ್ತು ಸ್ವ ಪಕ್ಷೀಯ ನಾಯಕರ ಅಸಮಾಧಾನಕ್ಕೆ ಮಣಿದು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಹೌದು, ಈಗಾಗಲೇ ಜಿಂದಾಲ್ಗೆ ಭೂಮಿ ಮಾರಾಟ ಮಾಡುವ ನಿರ್ಧಾರ ಖಂಡಿಸಿ ಬಿಜೆಪಿ ಮೂರು ದಿನ ಬೆಂಗಳೂರಿನಲ್ಲಿ ಅಹೋರಾತ್ರಿ ಹೋರಾಟಕ್ಕೆ ನಿರ್ಧರಿಸಿದ್ದು ಅದಕ್ಕೂ ಮುನ್ನಾದಿನ ಬಿಜೆಪಿ ಯುವ ಮೋರ್ಚಾ ದೊಡ್ಡಮಟ್ಟದ ಹೋರಾಟ ಹಮ್ಮಿಕೊಂಡಿದೆ. ಬಿಜೆಪಿಯ ದೊಡ್ಡಮಟ್ಟದ ಹೋರಾಟದಿಂದ ಪಕ್ಷ ಹಾಗೂ ಮೈತ್ರಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಭೂಮಿ ಮಾರಾಟ ನಿರ್ಧಾರವನ್ನು ಮರು ಚಿಂತನೆ ನಡೆಸಲು ಮುಂದಾಗಿದ್ದಾರೆ.
ಅಲ್ಲದೇ ರಾಜ್ಯದ ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ ಪಾಟೀಲ್ ಕೂಡ ಸರ್ಕಾರದ ನಿಲುವಿಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದೆ. ಭೂಮಿ ಮಾರಾಟ ಮಾಡದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಿಂದಾಲ್ ನಿಂದ ಸರ್ಕಾರಕ್ಕೆ ಬಾಕಿ ಬರಬೇಕಿದೆ. ಇಂತಹ ಸಂದರ್ಭದಲ್ಲಿ ಭೂಮಿ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಮೈತ್ರಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದರಿಂದ ಮುಜುಗರಕ್ಕೆ ಸಿಲುಕಿರುವ ಸರ್ಕಾರ ನಿರ್ಧಾರ ಮರುಪರಿಶೀಲನೆ ಮಾಡುತ್ತಿದೆ ಎನ್ನಲಾಗಿದೆ.
ಅಲ್ಲದೇ ಇದೆಲ್ಲವನ್ನು ದೆಹಲಿ ವರೆಗೂ ಕೊಂಡೊಯ್ಯುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ. ಸಂಸತ್ ಅಧಿವೇಶನದ ವೇಳೆ ಜಿಂದಾಲ್ಗೆ ಜಮೀನು ನೀಡಿದ್ದನ್ನು ಪ್ರಸ್ತಾಪಿಸಿ ಕಲಾಪದಲ್ಲಿ ದೊಡ್ಡಮಟ್ಟದ ಹೋರಾಟಕ್ಕೆ ಬಿಜೆಪಿ ತಂತ್ರ ರೂಪಿಸಿದೆ ಒಂದು ವೇಳೆ ಅಲ್ಲಿ ಚರ್ಚೆ ನಡೆದಿದ್ದೇ ಆದಲ್ಲಿ ಮೈತ್ರಿ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳಲು ರಾಜ್ಯದ ನಾಯಕರೇ ಇಲ್ಲ ಇದರಿಂದಾಗಿ ಮುಜುಗರವಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಕೂಡ ಈ ವಿಚಾರವನ್ನು ಮರುಪರಿಶೀಲನೆ ಮಾಡುವಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮೂಲಕ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸಂದೇಶ ರವಾನಿಸಿದೆ.
ಈ ಸಂಬಂಧ ಕಾಂಗ್ರೆಸ್ ನಾಯಕರು ಜೆಡಿಎಸ್ ನಾಯಕರೊಂದಿಗೆ ಸಮಾಲೋಚನೆ ನಡೆಸಿ ತಾತ್ಕಾಲಿಕವಾಗಿ ಜಿಂದಾಲ್ಗೆ ಭೂಮಿ ಮಾರಾಟ ಮಾಡುವ ತೀರ್ಮಾನಕ್ಕೆ ತಡೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ ವೇಳೆಗೆ ಸರ್ಕಾರ ಅಧಿಕೃತವಾಗಿ ಈ ವಿಷಯ ಪ್ರಕಟಿಸಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.