ಬೆಂಗಳೂರು: ಕರ್ನಾಟಕ ರಾಜ್ಯ ಹಲವು ವಿಶ್ವವಿಖ್ಯಾತ ದೇವಾಲಯಗಳನ್ನು ಹೊಂದಿದ್ದು, ಭಕ್ತ ಸಾಗರವೇ ಹರಿದು ಬರುತ್ತದೆ. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಪ್ರಸಿದ್ಧ ದೇವಸ್ಥಾನಗಳು ಸಾವಿರಾರು ಎಕರೆ ಬೆಲೆ ಬಾಳುವ ಭೂಮಿ ಹೊಂದಿದೆ. ಆದರೆ, ಈ ದೇವರ ಭೂಮಿ ಮೇಲೆಯೇ ಭೂಗಳ್ಳರು ವಕ್ರ ದೃಷ್ಟಿ ಬೀರಿದ್ದಾರೆ. ಈ ಕುರಿತು ಸಮಗ್ರ ವರದಿ ಇಲ್ಲಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳು:
ಮುಜರಾಯಿ ಇಲಾಖೆ ವ್ಯಾಪ್ತಿಗೆ 34,564 ದೇವಾಲಯಗಳು ಬರುತ್ತವೆ. ಈ ಪೈಕಿ ಪ್ರಸಿದ್ಧಿ ಪಡೆದಿರುವ ಎ ವರ್ಗದ (25 ಲಕ್ಷ ರೂ. ಮೇಲ್ಪಟ್ಟ ವಾರ್ಷಿಕ ಆದಾಯ) 205 ದೇವಾಲಯಗಳಿದೆ. ಬಿ ವರ್ಗದ (5-25 ಲಕ್ಷ ರೂ. ವಾರ್ಷಿಕ ಆದಾಯ) ದೇವಾಲಯಗಳ ಸಂಖ್ಯೆ 139 ಇದೆ. ಸಿ ವರ್ಗದ (ವಾರ್ಷಿಕ 5 ಲಕ್ಷ ರೂ. ಗಿಂತ ಕಡಿಮೆ ಆದಾಯ) ಸಣ್ಣ ದೇವಾಲಯಗಳ ಸಂಖ್ಯೆ ಬರೋಬ್ಬರಿ 34,220.
ಈ ದೇವಾಲಯಗಳು ಸಾವಿರಾರು ಎಕರೆ ಭೂಮಿಯನ್ನು ಹೊಂದಿದೆ. ಮುಜರಾಯಿ ಇಲಾಖೆ ಪ್ರಕಾರ, ಈ ದೇವಸ್ಥಾನಗಳು ಸುಮಾರು 10,000 ಲಕ್ಷ ಕೋಟಿ ರೂ ಬೆಲೆ ಬಾಳುವ ಆಸ್ತಿ ಹೊಂದಿವೆ. ಆದರೆ, ದೇವರ ಭೂಮಿ ಮೇಲೆಯೇ ಭೂ ಗಳ್ಳರು ಕನ್ನ ಹಾಕಿದ್ದಾರೆ. ಈ ಸಂಬಂಧ ಹಲವು ದೂರುಗಳು, ಆರೋಪಗಳು ಕೇಳಿ ಬರುತ್ತಿರುತ್ತವೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ದೇವರ ಭೂಮಿಗೆ ಕನ್ನ ಹಾಕಿದ ಭೂ ಗಳ್ಳರನ್ನು ಪತ್ತೆ ಹಚ್ಚಿ ಭೂಮಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಾರಂಭಿಸಿದೆ.
ದೇವಾಲಯಗಳ ಭೂಮಿ ಸರ್ವೇ ಕಾರ್ಯ:
ಸರ್ಕಾರ ದೇವಾಲಯಗಳ ಭೂ ಒತ್ತುವರಿಯನ್ನು ಪತ್ತೆ ಹಚ್ಚಿ ಅವುಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆಯನ್ನು ಕಳೆದ ವರ್ಷದ ಆರಂಭದಲ್ಲೇ ಪ್ರಾರಂಭಿಸಿತ್ತು.
ಈ ಸಂಬಂಧ ಮುಜರಾಯಿ ದೇವಸ್ಥಾನಗಳಿಗೆ ಸೇರಿದ ಭೂಮಿಗಳ ಸರ್ವೇ ಕಾರ್ಯ ಪ್ರಾರಂಭಿಸಲಾಗಿದೆ. ಆದರೆ ಕೋವಿಡ್, ಲಾಕ್‌ಡೌನ್ ಹಿನ್ನೆಲೆ ಸರ್ವೇ ಕಾರ್ಯಕ್ಕೆ ಹಿನ್ನಡೆ ಉಂಟಾಯಿತು. ಆದರೂ ಇದೀಗ ಕಂದಾಯ ಇಲಾಖೆಗಳ ಮೂಲಕ ದೇವಾಲಯಗಳಿಗೆ ಸೇರಿದ ಭೂಮಿಯ ಸರ್ವೇ ಕಾರ್ಯ ನಡೆಸಲಾಗುತ್ತಿದ್ದು, ಭೂ ಒತ್ತುವರಿಯನ್ನು ಪತ್ತೆ ಹಚ್ಚಲಾಗುತ್ತಿದೆ.
ಪೂರ್ಣಗೊಂಡ ಸರ್ವೇ ಕಾರ್ಯವಿಷ್ಟು!
ಈಗಾಗಲೇ ಸುಮಾರು 250 ದೇವಸ್ಥಾನಗಳಿಗೆ ಸೇರಿದ ಭೂಮಿಯ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಸರ್ವೇಯರುಗಳ ಕೊರತೆಯಿದ್ದು ಸೀಮಿತ ಸರ್ವೇಯರುಗಳಿಂದ ಸರ್ವೇ ಕಾರ್ಯ ನಡೆಯುತ್ತಿದೆ. ಹೀಗಾಗಿ ಸರ್ವೇ ಕಾರ್ಯ ನಿಧಾನವಾಗಿ ನಡೆಯುತ್ತಿರುವುದಾಗಿ ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
176 ಒತ್ತುವರಿ ಪ್ರಕರಣ ಪತ್ತೆ:
ಸೆ. 26, 2020ಕ್ಕೆ ಮುಗಿಸಲಾದ ಸರ್ವೇಯಲ್ಲಿ ಒಟ್ಟು 176 ಒತ್ತುವರಿ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿರುವ ಬಗ್ಗೆ ಮುಜರಾಯಿ ಇಲಾಖೆ ಅಂಕಿ ಅಂಶ ನೀಡಿದೆ.
ಎ ವರ್ಗ ದೇವಾಲಯ:
- ಅಳತೆ ಕಾರ್ಯ ಪೂರ್ಣಗೊಂಡ ದೇವಾಲಯ- 56.
- ನಗರ ಮಾಪನದಲ್ಲಿ ಒಟ್ಟು ಭೂಮಿ- 2,01,444.49 ಚ.ಮೀ..
- ದೇವಾಲಯಗಳ ಕಂದಾಯ ಭೂಮಿ- 1523.19 ಎಕರೆ.
ಇಲ್ಲಿನ ಒತ್ತುವರಿ ಎಷ್ಟು?:
- ನಗರ ಮಾಪನ- 3433.33 ಚ.ಮೀ.
- ಕಂದಾಯ ಭೂಮಿ- 387.28 ಎಕರೆ.
ಬಿ ವರ್ಗ ದೇವಾಲಯ:
- ಅಳತೆ ಕಾರ್ಯ ಪೂರ್ಣಗೊಂಡ ದೇವಾಲಯ- 27.
- ನಗರ ಮಾಪನದಲ್ಲಿ ಒಟ್ಟು ಭೂಮಿ-50399.86 ಚ.ಮೀ.
- ದೇವಾಲಯಗಳ ಕಂದಾಯ ಭೂಮಿ- 3125.06 ಎಕರೆ.
ಒತ್ತುವರಿ ಎಷ್ಟು?:
- ನಗರ ಮಾಪನದ ಭೂಮಿ- 193.36 ಚ.ಮೀ.
- ಕಂದಾಯ ಭೂಮಿ- 2.12 ಎಕರೆ.
ಸಿ ವರ್ಗ ದೇವಾಲಯ:
- ಅಳತೆ ಕಾರ್ಯ ಪೂರ್ಣಗೊಂಡ ದೇವಾಲಯ- 164.
- ನಗರ ಮಾಪನದಲ್ಲಿ ಒಟ್ಟು ಭೂಮಿ- 174323.61 ಚ.ಮೀ.
- ದೇವಾಲಯಗಳ ಕಂದಾಯ ಭೂಮಿ- 14269.36 ಎಕರೆ.
ಒತ್ತುವರಿ ಎಷ್ಟು?:
- ನಗರಮಾಪನ ಭೂಮಿ- 886.32 ಚ.ಮೀ.
- ಕಂದಾಯ ಭೂಮಿ- 192.27 ಎಕರೆ.
ಇಲಾಖೆ ಹೇಳುವುದೇನು?
ದೇವಾಲಯಗಳಿಗೆ ಸೇರಿದ ಭೂಮಿಗಳ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. 2020 ಸೆಪ್ಟೆಂಬರ್ಗೆ ಸಲ್ಲಿಸಿದ ವರದಿ ಪ್ರಕಾರ ಈವರೆಗೆ 176 ಒತ್ತುವರಿ ಪ್ರಕರಣಗಳು ಪತ್ತೆಯಾಗಿವೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ 2ನೇ ಅಲೆ ಆರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಪೂಲಿಂಗ್ ಪರೀಕ್ಷೆ?
ದೇವಾಲಯಕ್ಕೆ ಸಂಬಂಧಿಸಿದ ಭೂಮಿಯ ಒತ್ತುವರಿ ಪ್ರಕರಣಗಳು ಕಂಡುಬಂದಲ್ಲಿ ಅದನ್ನು ತೆರವುಗೊಳಿಸಲು ಕರ್ನಾಟಕ ಭೂ ಕಂದಾಯ ಅಧಿನಿಯಮ1964, ಕರ್ನಾಟಕ ಭೂ ಕಬಳಕೆ ನಿಷೇಧ ಕಾಯ್ದೆ 2011 ಹಾಗೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಧತ್ತಿಗಳ ಅಧಿನಿಯಮ-1997 ಕಾಯ್ದೆ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.