ಬೆಂಗಳೂರು: ಎಲ್ಲರ ರಕ್ಷಣೆ ಮಾಡಬೇಕಾದವರು, ಎಲ್ಲರ ಮೇಲೆ ನಿಗಾ ಇಡುವುದು ಸರಿಯೇ? ದೂರವಾಣಿ ಕದ್ದಾಲಿಕೆ ಒಂದು ಕ್ರಿಮಿನಲ್ ಅಪರಾಧ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಟೆಲಿಫೋನ್ ಕದ್ದಾಲಿಕೆ ಪ್ರಕರಣ ವಿಚಾರ ಮಾತನಾಡಿ, ಯಾರು ಎಷ್ಟೇ ದೊಡ್ಡವರಿರಲಿ ಅವರ ಮೇಲೆ ಕ್ರಮ ಆಗಬೇಕು. ಜವಾಬ್ದಾರಿ ಸ್ಥಾನದಲ್ಲಿರುವವರು ಇಂತಹ ಕೆಲಸ ಮಾಡುವುದು ತಪ್ಪು ಎಂದರು.
ರಕ್ಷಣೆ ಮಾಡುವವರೇ ಎಲ್ಲರ ಫೋನ್ ಕದ್ದಾಲಿಕೆ ಮಾಡುವಂತದ್ದು, ಪೊಲೀಸ್ ವತಿಯಿಂದ ಒಂದು ರೀತಿಯಲ್ಲಿ ಬೆದರಿಕೆ ಒಡ್ಡುವಂತಹ ಕೆಲಸ ಮಾಡುವುದು ಸೂಕ್ತವಾದ ಕಾರ್ಯವಲ್ಲ. ಸೂಕ್ತ ತನಿಖೆಯಾಗಿ ಸಂಬಂಧಪಟ್ಟವರ ಮೇಲೆ ಕಾರ್ಯಾಚರಣೆ ಆಗಬೇಕು ಎನ್ನುವುದು ನನ್ನ ಅಭಿಪ್ರಾಯ. ಈ ಸಂಬಂಧ ಈಗಾಗಲೇ ಪ್ರಾಥಮಿಕ ತನಿಖೆ ಆರಂಭವಾಗಿದ್ದು ಆದಷ್ಟು ಬೇಗ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರಕರ್ನಾಟಕ ಪ್ರವಾಹ ಪರಿಸ್ಥಿತಿ ಹಿನ್ನೆಲೆ ನಿನ್ನೆ ಸಂಪುಟ ಸಭೆಯಲ್ಲಿ ಎಲ್ಲವನ್ನೂ ತಿಳಿಸಿದ್ದೇವೆ. ಎಲ್ಲವನ್ನ ತಿಳಿದು ನಂತರ ಕ್ರಮತೆಗೆದುಕೊಳ್ತಾರೆ. ಹಣಕಾಸು ಸಚಿವರು ಹಾಗೂ ಗೃಹಸಚಿವರು ಬಂದು ಕರ್ನಾಟಕದಲ್ಲಿ ಪರಿಶೀಲಿಸಿ ತೆರಳಿದ್ದಾರೆ. ಆದಷ್ಟು ಶೀಘ್ರ ಪರಿಹಾರ ಸಿಗಲಿದೆ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ವಿಚಾರವನ್ನು ಗೃಹಮಂತ್ರಿಗಳು ಹಾಗೂ ಪ್ರಧಾನಿ ಕುಳಿತು ಚರ್ಚಿಸಿ ನಿರ್ಧರಿಸುತ್ತಾರೆ. ಕೇವಲ ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ ಕೇರಳ ಸೇರಿದಂತೆ ಹಲವು ಭಾಗಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಯಾವುದೇ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಬೇಕಾಗುತ್ತದೆ. ದೇಶದ ಪ್ರಸ್ತುತ ವ್ಯವಸ್ಥೆ ಹೇಗಿದೆ ಎನ್ನುವುದನ್ನು ಗಮನಿಸಿ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.