ಬೆಂಗಳೂರು: ತಂದೆ-ತಾಯಿ ನಮಗೆ ಜೀವ ಕೊಟ್ಟರೆ, ಶಿಕ್ಷಕರು ನಮ್ಮ ಜೀವನ ರೂಪಿಸುತ್ತಾರೆ. ಒಬ್ಬ ಶಿಕ್ಷಕನ ಮಗನಾಗಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಸನ್ಮಾನ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತೋಷದ ವಿಷಯ ಎಂದು ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಆರೋಗ್ಯ ವಿಜ್ಞಾನ ಇಲಾಖೆಯಲ್ಲಿ ಗಣನೀಯ ಸಾಧನೆ ಮಾಡಿರುವ 11 ಶಿಕ್ಷಕರಿಗೆ ಸನ್ಮಾನ ಮಾಡಿ ಮಾತನಾಡಿದರು. ನನಗೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಹೋಗಲು ಬಹಳ ಉತ್ಸಾಹ, ಅಭಿಮಾನ. ಶಿಕ್ಷಕರ ಮಕ್ಕಳು ಅನೇಕ ಉನ್ನತ ಸ್ಥಾನಗಳಲ್ಲಿ ಇದ್ದಾರೆಂದು ಶ್ಲಾಘಿಸಿದರು.
ಒಳ್ಳೆಯ ಅಲೋಚನೆಗಳಿಂದ ಸಮಾಜಕ್ಕೆ ಏನಾದರು ಕೊಡುಗೆ ಕೊಡಬೇಕು ಎಂಬ ಅಲೋಚನೆಗಳು ಶಿಕ್ಷಕರಲ್ಲಿ ಅಡಕವಾಗಿವೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಈ ದೇಶದಲ್ಲೇ ಅತಿದೊಡ್ಡ ವಿಶ್ವವಿದ್ಯಾಲಯ. ಇಂತಹ ವಿದ್ಯಾಲಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಜನಪರವಾದ ಉತ್ತಮ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಶಿಕ್ಷರ ದಿನಾಚರಣೆ ಅಂಗವಾಗಿ ಅವರಿಗೆ ಸನ್ಮಾನ ಮಾಡ್ತಿರೋದು ಅತ್ಯಂತ ಪುಣ್ಯದ ಕೆಲಸ ಎಂದು ಹೇಳಿದರು.