ಬೆಂಗಳೂರು: ಕಳೆದ ಎರಡು - ಮೂರು ವರ್ಷಗಳಿಂದ ಕಾಯುತ್ತಿದ್ದ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್ ಆಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಅಧಿಕೃತ ವೇಳಾಪಟ್ಟಿ ಹಾಗೂ ಅಧಿಸೂಚನೆಯನ್ನು ಇಂದು ಪ್ರಕಟಿಸಿದೆ. ಉಭಯ ಸದನಗಳಲ್ಲಿ ಅನುಮೋದನೆ ಪಡೆದು ಕಾಯ್ದೆ ಅಧಿಸೂಚಿಸಿದ ಸಂದರ್ಭದಲ್ಲಿ ಕೆಲವು ಶಿಕ್ಷಕರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು.
ಅದಕ್ಕಾಗಿ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದೆವು. ಸಚಿವ ಸಂಪುಟದ ಅನುಮೋದನೆಯನ್ನು ಪಡೆದು ರಾಜ್ಯಪಾಲರು ಒಪ್ಪಿದ ಬಳಿಕ ಸುಗ್ರೀವಾಜ್ಞೆಯನ್ನು ಹೊರತರಲಾಗಿದೆ.
ಯಾವಾಗ ಕೌನ್ಸೆಲಿಂಗ್ ಪ್ರಕ್ರಿಯೆ:
ಹೆಚ್ಚುವರಿ ಮತ್ತು ಕಡ್ಡಾಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಮುಂದಿನ ತಿಂಗಳ ಜುಲೈ 12 ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 21 ರಂದು ವರ್ಗಾವಣಾ ಪ್ರಕ್ರಿಯೆಗೆ ಕೌನ್ಸೆಲಿಂಗ್ ನಡೆಸಲಾಗುತ್ತೆ. ಕಳೆದ ಸಾಲಿನ ವರ್ಗಾವಣೆಗಾಗಿ ಸ್ವೀಕಾರ ಮಾಡಿರುವ ಅರ್ಜಿಗಳಿಗೆ ಸಂಬಂಧಪಟ್ಟಂತೆ ಪ್ರಕ್ರಿಯೆ ಜುಲೈ 26 ರಿಂದ ಆರಂಭವಾಗಲಿದ್ದು, 2022ರ ಜನವರಿ 14 ರಂದು ಕೌನ್ಸಿಂಗ್ ನಡೆಸಲಾಗುತ್ತದೆ. ಪ್ರಸಕ್ತ ಸಾಲಿನ ವರ್ಗಾವಣೆಗೆ ಸ್ವೀಕರಿಸುವ ಅರ್ಜಿಗಳ ಪ್ರಕ್ರಿಯೆಗೆ ಜುಲೈ 27 ರಿಂದ ಆರಂಭವಾಗಲಿದ್ದು, 2022 ರ ಫೆಬ್ರವರಿ 26 ರಂದು ಕೌನ್ಸೆಲಿಂಗ್ ನಡೆಸಲಾಗುತ್ತದೆ..
ವರ್ಗಾವಣಾ ಅರ್ಜಿಗಳನ್ನು ಸಲ್ಲಿಸುವ ಕ್ರಮ ಮತ್ತು ಅರ್ಹತೆ ಹೀಗಿದೆ:
ಕೋರಿಕೆ ವರ್ಗಾವಣೆ:
ಈ ಹಿಂದೆ 2020ರ ಡಿಸೆಂಬರ್ ಮತ್ತು ಪೂರಕ ಅಧಿಸೂಚನೆಗಳನುಸಾರ ಸ್ವೀಕೃತವಾಗಿರುವ ಅರ್ಜಿಗಳನ್ನು ನಿಯಮಾನುಸಾರ ಒಂದನೇ ಹಂತದ ಕೌನ್ಸೆಲಿಂಗ್‌ಗೆ ಪರಿಗಣಿಸಲಾಗುತ್ತದೆ. ಅದು ಅರ್ಜಿ ಸಲ್ಲಿಸಿರುವ ಶಿಕ್ಷಕರು ಇಚ್ಛೆ ಪಟ್ಟಲ್ಲಿ ಅರ್ಜಿ ಹಿಂಪಡೆಯಲು ಅವಕಾಶ ನೀಡಲಾಗಿದೆ. ಹೀಗೆ ಹಿಂಪಡೆದ ನಂತರ ಉಳಿಯುವ ಬಾಕಿ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹ ಇರುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
2ನೇ ಹಂತದ ಕೌನ್ಸೆಲಿಂಗ್‌ಗಾಗಿ ಅರ್ಜಿ ಸಲ್ಲಿಸುವ ವಿಧಾನ:
1ನೇ ಸುತ್ತಿನ ವರ್ಗಾವಣೆ ಕೌನ್ಸೆಲಿಂಗ್ ಪೂರ್ಣಗೊಂಡ ನಂತರದಲ್ಲಿನ ಖಾಲಿ ಹುದ್ದೆಗಳಿಗೆ ಎರಡನೇಯ ಸುತ್ತಿನಲ್ಲಿ ಹಮ್ಮಿಕೊಳ್ಳುವ ಪ್ರತ್ಯೇಕ ಕೌನ್ಸೆಲಿಂಗ್ ಪ್ರಕ್ರಿಯೆಗಳಿಗೆ ಅರ್ಜಿಯನ್ನು ಸಲ್ಲಿಸ ಬಯಸುವವರು ನಿಯಮಿತ ವಿಧಾನದಲ್ಲಿ ಅರ್ಜಿಗಳನ್ನು ಸಲ್ಲಿಸಿಕೊಳ್ಳಬಹುದಾಗಿದೆ.
ಹಾಗೇ, ಕಳೆದ ವರ್ಷದ ಅಧಿಸೂಚನೆಗನುಸಾರ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಆದರೆ, ಅರ್ಜಿ ಸಲ್ಲಿಸಿದವರು ಸ್ವ ಇಚ್ಛೆಯಿಂದ ಅರ್ಜಿ ಹಿಂಪಡೆಯಲು ಅವಕಾಶವಿದೆ. ಹೀಗೆ ಅರ್ಜಿ ಹಿಂಪಡೆದವರು 2ನೇ ಹಂತದ ಕೌನ್ಸಲಿಂಗ್‌ಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
ಆದರೆ, 1ನೇ ಹಂತದ ಕೌನ್ಸಿಲಿಂಗ್ ಗೆ ಅವಕಾಶವಿರುವುದಿಲ್ಲ. ಜೊತೆಗೆ ಅರ್ಜಿ ಸಲ್ಲಿಸಿರುವವರ ಅರ್ಜಿಯು ಪರಿಶೀಲನೆ ಸಂದರ್ಭದಲ್ಲಿ ತಿರಸ್ಕರಿಸಲ್ಪಟ್ಟಲ್ಲಿ 2ನೇ ಹಂತದ ಕೌನ್ಸೆಲಿಂಗ್‌ಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಆದರೆ 1ನೇ ಹಂತದ ಕೌನ್ಸಿಲಿಂಗ್ ಗೆ ಅವಕಾಶವಿರುವುದಿಲ್ಲ.
- ಶಿಕ್ಷಕರು ಕೋರಿಕೆ ಮೇಲೆ ಹೊಸದಾಗಿ ವರ್ಗಾವಣೆಗೆ ಅರ್ಜಿ ಸಲ್ಲಿಸುವುದಾದಲ್ಲಿ ನಿಗದಿಪಡಿಸಿರುವ ಕೊನೆಯ ದಿನಾಂಕದ ಒಳಗೆ Onlineನಲ್ಲಿ ಇಲಾಖಾ ತಂತ್ರಾಂಶದ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು ಮತ್ತು ನಿಗದಿಪಡಿಸಿದ ದಿನಾಂಕದ ಒಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆದ್ಯತೆ ಪ್ರಕರಣದ ಪರಿಶೀಲನೆಗೆ ಮೂಲ ದಾಖಲೆಗಳೊಂದಿಗೆ ಹಾಜರಾಗಿ ಸ್ವೀಕೃತಿ ಪಡೆಯತಕ್ಕದ್ದು.
- ಖಾಯಂ ಪೂರ್ವ ಸೇವಾ ಅವಧಿ ತೃಪ್ತಿಕರವೆಂಬುದಾಗಿ ಘೋಷಣೆ ಯಾಗಿರಬೇಕು. ಜಿಲ್ಲೆಯೊಳಗಿನ ಅಥವಾ ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕಕ್ಕೆ ವರ್ಗಾವಣೆ ಬಯಸುವ ಶಿಕ್ಷಕರು ಅರ್ಜಿ ಸಲ್ಲಿಸಲು ವರ್ಗಾವಣೆ ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರಬೇಕು.
- ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020 [ಕರ್ನಾಟಕ ಅಧಿನಿಯಮ ಸಂಖ್ಯೆ-4ರ ಪ್ರಕರಣ 2(ಡಿ) ಪ್ರಕಾರ ಕನಿಷ್ಠ ಸೇವಾವಧಿ ಎಂದರೆ ಮರುನಿಯೋಜನೆ ಹೊಂದಿರುವ ಶಾಲೆಯಲ್ಲಿ ಸಲ್ಲಿಸಿದ ಸೇವೆಯೂ ಒಳಗೊಂಡಂತೆ ಮೂರು ವರ್ಷಗಳ ನಿರಂತರ ಸೇವೆ ಎಂದು ಸ್ಪಷ್ಟಪಡಿಸಿರುವುದನ್ನು ತಪ್ಪದೇ ಪಾಲಿಸುವುದು.
- ವರ್ಗಾವಣೆ ಅಧಿನಿಯಮ ಜಾರಿಯಾದ ನಂತರದಲ್ಲಿ ಆದ್ಯತೆಯನ್ನು ಇಡೀ ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ಪಡೆಯಲು ನಿಯಮಗಳಲ್ಲಿ ಅವಕಾಶವಿರುತ್ತದೆ.
- ಆದ್ಯತೆಯನ್ನು ಕಾಲಮಿತಿಯೊಳಗೆ ಮಾಡದಿದ್ದರೆ, ಆಗ ಅದನ್ನು ನಂತರದ ಹಂತದಲ್ಲಿ ಪರಿಗಣಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಇಂತಹ ಅರ್ಜಿಗಳನ್ನು ಸಾಮಾನ್ಯ ಪ್ರಕರಣದಡಿ ಪರಿಗಣಿಸಲಾಗುವುದು.
- ಕಲ್ಯಾಣ ಕರ್ನಾಟಕ ಪ್ರದೇಶದ ಯಾವುದೇ ಆರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಕಲ್ಯಾಣ ಕರ್ನಾಟಕ ಪ್ರದೇಶದ ಹೊರಗೆ ವರ್ಗಾವಣೆಯನ್ನು ಕೋರುವುದಕ್ಕಾಗಿ ಎಲ್ಲಾ ಇತರ ಅರ್ಹತಾ ಷರತ್ತುಗಳ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹತ್ತು ವರ್ಷಗಳ ನಿರಂತರ ಸೇವೆ ಪೂರೈಸಿರಬೇಕು.
- ಶಿಕ್ಷಕರು ಜೇಷ್ಠತಾ ಘಟಕದ ಹೊರಗೆ ಕೋರಿಕೆ ವರ್ಗಾವಣೆ ಪಡೆದಲ್ಲಿ ಅವರು ತಮ್ಮ ಶ್ರೇಷ್ಠತೆಯನ್ನು ಕಳೆದುಕೊಳ್ಳತಕ್ಕದ್ದು. ಮತ್ತು ಅವರು ವರ್ಗಾವಣೆಯಾಗಿರುವ ಹೊಸ ಜೇಷ್ಠತೆಯ ಘಟಕದ ವೃಂದದಲ್ಲಿ ಎಲ್ಲರಿಗಿಂತಲೂ ಕೆಳ ಸ್ಥಾನದಲ್ಲಿರತಕ್ಕದ್ದು.
ಆದ್ಯತೆ ಬಯಸಿ ಅರ್ಜಿ ಸಲ್ಲಿಸುವವರು:
ಆದ್ಯತೆ ಬಯಸಿ ಅರ್ಜಿ ಸಲ್ಲಿಸುವ ಶಿಕ್ಷಕರು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020 ಕರ್ನಾಟಕ ಅಧಿನಿಯಮ ಸಂಖ್ಯೆ:04ರ ಅನ್ವಯ ಹಾಗೂ ಅದರಡಿ ರೂಪಿಸಲಾಗಿರುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು 2020 ರಲ್ಲಿನ ನಿಯಮ 10 ರಲ್ಲಿ ನಿರ್ದಿಷ್ಟಪಡಿಸಿರುವ ಆದ್ಯತೆಗಳ ಆಯ್ಕೆಯನ್ನು ಚಲಾಯಿಸಿ ಅರ್ಜಿ ಸಲ್ಲಿಸಬಹುದು.
ಹಾಗೂ ಕೋರಿರುವ ಆದ್ಯತೆಯ ಕುರಿತು ನಿಯಮಗಳಲ್ಲಿ ಸ್ಪಷ್ಟಪಡಿಸಿರುವ ಸಕ್ಷಮ ಪ್ರಾಧಿಕಾರಗಳಿಂದ ಪ್ರಮಾಣ ಪತ್ರಗಳನ್ನು ಪಡೆದು ವರ್ಗಾವಣೆ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಅರ್ಜಿಯೊಂದಿಗೆ ಅಪ್ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ಶಿಕ್ಷಕರು ಒಂದಕ್ಕಿಂತ ಹೆಚ್ಚು ಆದ್ಯತೆಯನ್ನು ವರ್ಗಾವಣೆ ಅರ್ಜಿಯಲ್ಲಿ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಪ್ರಮಾಣ ಪತ್ರಗಳ ಮೂಲ ಪ್ರತಿಯನ್ನು ಕೌನ್ಸಿಲಿಂಗ್ ಸಮಯದಲ್ಲಿ ಕಡ್ಡಾಯವಾಗಿ ಪರಿಶೀಲನೆಗೆ ಹಾಜರುಪಡಿಸುವುದು.
ಪರಸ್ಪರ ವರ್ಗಾವಣೆಗಳು:
ಅರ್ಹತೆ:
1) ಕನಿಷ್ಠ ಏಳು ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿರಬೇಕು
2) ನಿವೃತ್ತಿಗಿಂತ ಮುಂಚಿ, ಕನಿಷ್ಠ ಐದು ವರ್ಷಗಳ ಉಳಿಕೆ ಸೇವೆಯನ್ನು ಹೊಂದಿರಬೇಕು.
3) ಈ ಹಿಂದೆ ಜೇಷ್ಠತಾ ಘಟಕದ ಹೊರಗೆ ಪರಸ್ಪರ ವರ್ಗಾವಣೆ ಪಡೆದಿದ್ದಲ್ಲಿ ಪುನಃ ಜೇಷ್ಠತಾ ಘಟಕದ ಹೊರಗೆ ಪರಸ್ಪರ ವರ್ಗಾವಣೆಗೆ ಅವಕಾಶವಿರುವುದಿಲ್ಲ.
- ಇಬ್ಬರೂ ಶಿಕ್ಷಕರು ಪರಸ್ಪರ ವರ್ಗಾವಣೆ ಕೋರಿದಾಗ, ಪ್ರತಿಯೊಬ್ಬರು ಕೆಜಿಐಡಿ ಸಂಖ್ಯೆಗಳ ಮುಖಾಂತರ ಅವರ ಅರ್ಜಿಗಳನ್ನು ಲಿಂಕ್ ಮಾಡುವ ಮೂಲಕ ವರ್ಗಾವಣೆ ಪ್ರಕ್ರಿಯೆ ನಿಯಂತ್ರಣ ಅಧಿಕಾರಿಯಿಂದ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಶಿಕ್ಷಕ ವರ್ಗಾವಣೆ ಪೋರ್ಟಲ್‌ನಲ್ಲಿ ಗೊತ್ತು ಪಡಿಸಿದ ಸಮಯದಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
- ಕಲ್ಯಾಣ ಕರ್ನಾಟಕ ಪ್ರದೇಶದ ಯಾವುದೇ ಆರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಕಲ್ಯಾಣ ಕರ್ನಾಟಕ ಪ್ರದೇಶದ ಹೊರಗೆ ವರ್ಗಾವಣೆಯನ್ನು ಕೋರುವುದಕ್ಕಾಗಿ ಎಲ್ಲಾ ಇತರ ಅರ್ಹತಾ ಷರತ್ತುಗಳ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹತ್ತು ವರ್ಷಗಳ ನಿರಂತರ ಸೇವೆ ಪೂರೈಸಿರಬೇಕು.
-ಸಕ್ಷಮ ಪ್ರಾಧಿಕಾರವು, ಅರ್ಹ ಸಂದರ್ಭಗಳ (ಪ್ರಕರಣಗಳ) ಅಂತಿಮ ಪಟ್ಟಿಯನ್ನು ಪ್ರಕಟಿಸ ತಕ್ಕದ್ದು ಮತ್ತು ಕೌನ್ಸಿಲಿಂಗ್ ಪ್ರಕಿಯೆಯನ್ನು ಕೈಗೊಳ್ಳತಕ್ಕದ್ದು.
ಶಿಸ್ತು ಪ್ರಕರಣಗಳನ್ನು ಎದುರಿಸುತ್ತಿರುವ ಶಿಕ್ಷಕರ ವರ್ಗಾವಣೆಗಳು:
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು[ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020ರ ಪ್ರಕರಣ(7)ರಲ್ಲಿ ಸ್ಪಷ್ಟಪಡಿಸಿರುವಂತೆ ಕರ್ನಾಟಕ ನಾಗರಿಕ ಸೇವಾ [ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು] ನಿಯಮಗಳು- 1957ರಡಿ ಶಿಸ್ತು ಪ್ರಕರಣಗಳನ್ನು ಎದುರಿಸುತ್ತಿರುವ ಶಿಕ್ಷಕರು ಅಥವಾ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಶಿಕ್ಷಕರು ಕನಿಷ್ಠ ಸೇವಾವಧಿ ಪೂರೈಸದಿದ್ದರೂ ಸಹ, ಇವರನ್ನು "ಸಿ" ವಲಯದಲ್ಲಿ ಖಾಲಿ ಇರುವ ಹುದ್ದೆಗೆ ವರ್ಗಾಯಿಸತಕ್ಕದ್ದು, ಇನ್ನು ವರ್ಗಾವಣೆಗಳನ್ನ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗಳು ಮುಕ್ತಾಯಗೊಂಡ ನಂತರ ನಡೆಸಲು ಸಕ್ಷಮ ಪ್ರಾಧಿಕಾರಿಗಳು ಕ್ರಮ ವಹಿಸುವುದು.