ಬೆಂಗಳೂರು: ನಗರದಲ್ಲಿ ಮಂಗಗಳ ಉಪಟಳ ತಗ್ಗಿಸಲು ಪರಿಣಾಮಕಾರಿ ಕಾರ್ಯತಂತ್ರ ರೂಪಿಸುವ ಕುರಿತು ತ್ವರಿತವಾಗಿ ಸಭೆ ನಡೆಸಿ ಕಾರ್ಯೋನ್ಮುಖರಾಗಬೇಕು ಎಂದು ಬಿಬಿಎಂಪಿ ಮತ್ತು ಅರಣ್ಯ ಇಲಾಖೆಗೆ ಹೈಕೋರ್ಟ್ ತಾಕೀತು ಮಾಡಿದೆ.
ಈ ಕುರಿತು ನಗರದ ವಕೀಲ ರಾಧಾನಂದನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಬಳಿಕ ಪೀಠ, ನ್ಯಾಯಾಲಯದ ನಿರ್ದೇಶನದಂತೆ ಜುಲೈ 20ರಂದು ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದಾರೆ.
ಆದರೆ, ಸಭೆಯ ನಡಾವಳಿ ಗಮನಿಸಿದರೆ ಕೋತಿಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕಾರ್ಯತಂತ್ರ ರೂಪಿಸಬೇಕೆಂದಷ್ಟೇ ಚರ್ಚೆ ನಡೆಸಲಾಗಿದೆ. ಇಂತಹ ಚರ್ಚೆಗಳಿಂದ ಕಾರ್ಯತಂತ್ರ ಜಾರಿಯಾಗುವುದಿಲ್ಲ ಎಂದು ಪೀಠ ಬೇಸರ ವ್ಯಕ್ತಪಡಿಸಿತು.
ಅಲ್ಲದೇ, ವೈಜ್ಞಾನಿಕ ರೀತಿಯಲ್ಲಿ ಮಂಗಗಳ ಹಾವಳಿ ನಿಯಂತ್ರಿಸಲು ಹಾಗೂ ಅವುಗಳಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಶೀಘ್ರ ಮತ್ತೊಂದು ಸುತ್ತಿನ ಸಭೆ ನಡೆಸಬೇಕು. ಸಭೆಯಲ್ಲಿ ಕಾರ್ಯತಂತ್ರ ರೂಪಿಸುವ ಕುರಿತು ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿತು.
ಅಲ್ಲದೇ, ಮುಂದಿನ ವಿಚಾರಣೆ ವೇಳೆಗೆ ಅಧಿಕಾರಿಗಳು ಸಭೆ ನಡೆಸಿ, ಕಾರ್ಯತಂತ್ರ ಒಳಗೊಂಡ ವಿವರವನ್ನು ಪ್ರಮಾಣಪತ್ರದ ಮೂಲಕ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿತು.
ಸಹಾಯವಾಣಿ ಆರಂಭ: ಇದಕ್ಕೂ ಮುನ್ನ ಸರ್ಕಾರ ಮತ್ತು ಪಾಲಿಕೆ ಪರ ವಕೀಲರು ಮಾಹಿತಿ ನೀಡಿ, ಬಿಬಿಎಂಪಿಯಲ್ಲಿ ಮಂಗಗಳ ಹಾವಳಿ ತಡೆ ಸಂಬಂಧ ಸಹಾಯವಾಣಿ ಆರಂಭಿಸಲಾಗಿದೆ. ಸಾರ್ವಜನಿಕರು ಕರೆ ಮಾಡಿ ಮಂಗಗಳ ತೊಂದರೆ ಬಗ್ಗೆ ಮಾಹಿತಿ ನೀಡಿದರೆ ತಕ್ಷಣ ವನ್ಯಜೀವಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಮಂಗಗಳನ್ನು ಹಿಡಿದು ನಗರದ ಹೊರಗಿನ ಕಾಡಿನಲ್ಲಿ ಬಿಟ್ಟು ಬರುತ್ತಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಹಾಯವಾಣಿ ಬಗ್ಗೆ ಸಾರ್ವಜನಿರಿಗೆ ಮಾಹಿತಿ ತಲುಪಿಸಲು ಏನು ಕ್ರಮ ಕೈಗೊಂಡಿದ್ದೀರಿ, ಮಂಗಗಳನ್ನು ಹಿಡಿಯುವವರು ಯಾರು? ಆ ತಂಡಗಳ ಹೊಣೆ ಖಾಸಗಿಯವರಿಗೆ ನೀಡಿದ್ದೀರಿ, ಖಾಸಗಿಯವರಿಗೆ ನೀಡಿದ್ದರೆ ಅವರಿಗೆ ಹಣ ನೀಡುವವರು ಯಾರು? ಸರ್ಕಾರದ ಪ್ರಮಾಣಪತ್ರದಲ್ಲಿ ನೀಡಿರುವ ವಿವರಗಳಲ್ಲಿ ಸ್ಪಷ್ಟತೆಯೇ ಇಲ್ಲ ಎಂದಿತು.
ಅಲ್ಲದೇ, ಬಿಬಿಎಂಪಿಯಲ್ಲಿ ಮಂಗಗಳ ಹಾವಳಿ ತಡೆಗೆ ಆರಂಭಿಸಿರುವ ಸಹಾಯವಾಣಿ ಬಗ್ಗೆ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡುವಂತೆ ಸೂಚನೆ ನೀಡಿತು.
ಓದಿ: ಹೆದ್ದಾರಿಯಲ್ಲಿ ಜಿಂಕೆಗೆ ತಿಂಡಿ ತಿನಿಸಿ ಸೆಲ್ಫಿ: ಪತ್ರಕರ್ತನಿಗೆ 5 ಸಾವಿರ ರೂ. ದಂಡ