ಬೆಂಗಳೂರು: ಕೋವಿಡ್ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚನೆಯಂತೆ ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಿಯೂ ಯಾವೊಬ್ಬ ಸೋಂಕಿತನೂ ಸಹ ಚಿಕಿತ್ಸೆ ದೊರೆಯದೇ ನರಳದಂತೆ ಎಚ್ಚರ ವಹಿಸಬೇಕು. ಸರ್ಕಾರದ ಮಾರ್ಗಸೂಚಿಯಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸೂಕ್ತ ಹಾಸಿಗೆ ಮತ್ತು ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಬೇಕು. ಖಾಸಗಿ ಆಸ್ಪತ್ರೆಗಳು ಸ್ವಯಂಪ್ರೇರಿತವಾಗಿ ಸೋಂಕಿತರಿಗೆ ಸೇವೆಗಳನ್ನು ಒದಗಿಸಬೇಕೆಂದು ಕರೆ ನೀಡಿದರು.
ಒಂದು ವೇಳೆ ಸರ್ಕಾರ ಹೊರಡಿಸಿರುವ ಸೂಚನೆಗಳನ್ನು ಕಡೆಗಣಿಸಿ ಸೋಂಕಿತರಿಗೆ ಚಿಕಿತ್ಸೆಯನ್ನು ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಎಲ್ಲಾ ಆಸ್ಪತ್ರೆಗಳು ಮತ್ತು ನೀಡುತ್ತಿರುವ ಚಿಕಿತ್ಸಾ ವ್ಯವಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕೆಂದು ಅಧಿಕಾರಿಗಳಿಗೆ ಶಾಸಕ ವಿಶ್ವನಾಥ್ ಸೂಚಿಸಿದರು.
ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಕರ್ಫ್ಯೂವನ್ನು ಜಾರಿಗೊಳಿಸಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆ ಆಗದ ರೀತಿಯಲ್ಲಿ ಕರ್ಫ್ಯೂವನ್ನು ಜಾರಿಗೊಳಿಸಬೇಕು ಮತ್ತು ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಕೋವಿಡ್ ಸೋಂಕಿನಿಂದ ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿರುವ ಜನರ ಬಳಿ ಶವ ಸುಡಲು ಅಥವಾ ಅಂತ್ಯಸಂಸ್ಕಾರ ನಡೆಸಲು ಹಣಕ್ಕೆ ಪೀಡಿಸಬಾರದು. ಕುಟುಂಬ ಸದಸ್ಯರನ್ನು ಕಳೆದುಕೊಂಡವರ ದುಃಖದಲ್ಲಿ ಭಾಗಿಯಾಗಿ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆಯಬೇಕು. ಒಂದು ವೇಳೆ ಅಂತಹ ಪ್ರಕರಣಗಳು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮವನ್ನು ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದರು.
ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಬಿಡಿಎ ಅಧ್ಯಕ್ಷ ಸೂಚನೆ ನೀಡಿದರು.
ಪರಿಸ್ಥಿತಿ ತೀರಾ ಸಂಕಷ್ಟಕ್ಕೆ ತಲುಪಿದರೆ ಕಡುಬಡವರಿಗೆ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ತಲುಪಿಸಲು ಯೋಜನೆ ರೂಪಿಸಿಟ್ಟುಕೊಂಡಿರಬೇಕು ಎಂದು ವಿಶ್ವನಾಥ್ ಹೇಳಿದರು.
ಸಭೆಯಲ್ಲಿ ಯಲಹಂಕ ಕ್ಷೇತ್ರದ ನಾಲ್ಕು ವಾರ್ಡ್ ಗಳ ಉನ್ನತಾಧಿಕಾರಿಗಳು ಹಾಜರಿದ್ದರು.