ಬೆಂಗಳೂರು : ತೈಪೈ ಆರ್ಥಿಕ ಹಾಗೂ ಸಾಂಸ್ಕೃತಿಕ ಕೇಂದ್ರದ ಡೈರೆಕ್ಟರ್ ಜನರಲ್ ಬೆನ್ ವಾಂಗ್ ಅವರ ನೇತೃತ್ವದ ನಿಯೋಗ ಶುಕ್ರವಾರ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ, ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ಒಲವು ವ್ಯಕ್ತಪಡಿಸಿದೆ.
ಈ ನಿಯೋಗವನ್ನು ಭೇಟಿ ಮಾಡಿ ಮಾತನಾಡಿದ ಸಿಎಂ, ತೈವಾನ್ ಹಾಗೂ ಭಾರತ ದೇಶದ ನಡುವೆ ಆರ್ಥಿಕ ಹಾಗೂ ಸಾಂಸ್ಕೃತಿಕ ವಿನಿಮಯದ ಇತಿಹಾಸವಿದೆ. ಕರ್ನಾಟಕ ರಾಜ್ಯದತ್ತ ತೈವಾನ್ ಕಂಪನಿಗಳ ಒಲವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ತೈವಾನ್ ಕಂಪನಿಗಳೊಂದಿಗೆ ಮಾತುಕತೆಗಳನ್ನು ಸುಗಮಗೊಳಿಸಿ, ರಾಜ್ಯ ಸರ್ಕಾರ ಬಂಡವಾಳ ಹೂಡಿಕೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ತೈವಾನ್ ಹಾಗೂ ಭಾರತ ಇತ್ತೀಚಿನ ದಿನಗಳಲ್ಲಿ ಪ್ರಮುಖ ಪಾಲುದಾರರಾಗಿ ಹೊರಹೊಮ್ಮಿವೆ. ರಾಜ್ಯದಲ್ಲಿ ಈಗಾಗಲೇ ವಿಸ್ಟ್ರನ್, ಎಫ್‌ಎಫ್‌ಜಿ ಮತ್ತು ಸಿಡಿಸಿಯಂತಹ ತೈವಾನ್ ಕಂಪನಿಗಳು ಕಾರ್ಯಾರಂಭ ಮಾಡಿವೆ.
ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅತ್ಯುತ್ತಮ ವಾತಾವರಣವಿದೆ. ಕೈಗಾರಿಕಾ ಸ್ನೇಹಿ ಕಾಯ್ದೆಗಳು ಹಾಗೂ ನೀತಿಗಳ ಅನುಷ್ಠಾನ ಆಗುತ್ತಿದ್ದು, ಸುಲಭವಾಗಿ ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿದೆ. ಈ ಹಿನ್ನೆಲೆ ತೈವಾನ್ ಕಂಪನಿಗಳು ಬಂಡವಾಳ ಹೂಡಿಕೆಗೆ ಮಧ್ಯಸ್ಥಿಕೆ ವಹಿಸುವಂತೆ ನಿಯೋಗಕ್ಕೆ ತಿಳಿಸಿದರು.
ತೈಪೈ ಆರ್ಥಿಕ ಹಾಗೂ ಸಾಂಸ್ಕೃತಿಕ ಕೇಂದ್ರದ ಡೈರೆಕ್ಟರ್ ಜನರಲ್ ಬೆನ್ ವಾಂಗ್ ಮಾತನಾಡಿ, ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ತಿಳಿದುಕೊಳ್ಳಲು ತೈವಾನ್ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿವೆ ಎಂದು ಹೇಳಿದರು.
ನಂತರ ಈ ನಿಯೋಗ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ ಅವರ ನೇತೃತ್ವದ ಅಧಿಕಾರಿಗಳು ಹಾಗೂ ರಾಜ್ಯದಲ್ಲಿ ಹೂಡಿಕೆ ಮಾಡಿರುವ ಪ್ರಮುಖ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯದಲ್ಲಿ ಹೂಡಿಕೆಗೆ ಇರುವ ಪ್ರಮುಖ ಅವಕಾಶಗಳನ್ನು ತಿಳಿಸಿಕೊಡಲಾಯಿತು. ಇನ್‌ವೆಸ್ಟ್ ಕರ್ನಾಟಕ ಫೋರಂನ ಸಿಒಒ ಬಿ ಕೆ ಶಿವಕುಮಾರ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ, ಐಕೆಎಫ್ ಡೆಪ್ಯೂಟಿ ಡೈರೆಕ್ಟರ್ ಭೈರೇಗೌಡ ಉಪಸ್ಥಿತರಿದ್ದರು.