ಬೆಂಗಳೂರು: ಮುಖ್ಯಮಂತ್ರಿಗಳ 1 ಲಕ್ಷ ಬಹು ಮಹಡಿ ಯೋಜನೆಯಡಿ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ 5 ಸಾವಿರ ಮನೆಗಳ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ವಿವಿಧ ವಸತಿ ಯೋಜನೆಗಳಡಿ ಮುಂದಿನ ಎರಡು ವರ್ಷಗಳಲ್ಲಿ 9 ಲಕ್ಷ ಮನೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಇಲಾಖೆಯ ಯೋಜನೆಗಳ ಕುರಿತು ಅಧಿಕಾರಿಗಳಿಂದ ಸಿಎಂ ವಿಸ್ತೃತ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ವಿವಿಧ ವಸತಿ ಯೋಜನೆಗಳಡಿ ಮುಂದಿನ ಎರಡು ವರ್ಷಗಳಲ್ಲಿ 9 ಲಕ್ಷ ಮನೆ ನಿರ್ಮಿಸಲು ನಿರ್ಧರಿಸಲಾಗಿದೆ. ಇವುಗಳಲ್ಲಿ ರಾಜ್ಯದ ವಸತಿ ಯೋಜನೆಗಳಡಿ ನಿರ್ಮಿಸುವ 5 ಲಕ್ಷ ಮನೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಡಿ 4 ಲಕ್ಷ ಮನೆ ಸೇರಿವೆ ಎಂದರು.
ಮನೆ ನಿರ್ಮಿಸಲು ಪರಿಶಿಷ್ಟ ಫಲಾನುಭವಿಗಳಿಗೆ 1.75 ಲಕ್ಷ ಮತ್ತು ಇತರರಿಗೆ 1.20 ಲಕ್ಷ ರೂ. ಸಹಾಯಧನ ದೊರೆಯುತ್ತದೆ. ಕೇಂದ್ರದ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳಿಗೆ ಫಲಾನುಭವಿಗಳಿಗೆ ಶೇ.60 ಅಂದರೆ 72,000 ಮತ್ತು ರಾಜ್ಯದ ಪಾಲು ಶೇ.40 ಅಂದರೆ 48,000 ರೂ. ಸಹಾಯಧನ ಲಭ್ಯವಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಲಾ 100 ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಹಂತ ಹಂತವಾಗಿ ಮೊತ್ತ ಬಿಡುಗಡೆ: ಸೂರಿಲ್ಲದವರಿಗೆ ಸೂರು ಕಲ್ಪಿಸಲು ನಮ್ಮ ಸರ್ಕಾರ ಆಧ್ಯತೆ ನೀಡಿದ್ದು, ತ್ವರಿತವಾಗಿ ವಸತಿ ಯೋಜನೆಗಳನ್ನು ಮುಗಿಸಬೇಕು ಎಂದು ಸೂಚನೆ ನೀಡಿದ ಸಿಎಂ, ಪ್ರಸ್ತುತ ನಿರ್ಮಾಣದ ವಿವಿಧ ಹಂತಗಳಲ್ಲಿರುವ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ, ಡಾ. ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ, ದೇವರಾಜು ಅರಸು ವಸತಿ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆಗಳಡಿ ಮನೆಗಳನ್ನು ಪೂರ್ಣ ಮಾಡಲು 6,200 ಕೋಟಿ ರೂ.ಗಳ ಅಗತ್ಯವಿದೆ. ಹಂತ ಹಂತವಾಗಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಬಹು ನಿರೀಕ್ಷೆಯ ಮುಖ್ಯಮಂತ್ರಿಗಳ 1 ಲಕ್ಷ ಬೆಂಗಳೂರು ಬಹು ಮಹಡಿ ಯೋಜನೆಯಡಿ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ 5 ಸಾವಿರ ಮನೆಗಳ ಹಂಚಿಕೆ ಮಾಡಲಾಗುತ್ತದೆ ಎಂದು ಸಿಎಂ ಪ್ರಕಟಿಸಿದರು.
ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದಂತಾಗಿದೆ ಸುಮಲತಾ, ಹೆಚ್ಡಿಕೆ ವಾಕ್ಸಮರ: ಆರ್.ಅಶೋಕ್