ಬೆಂಗಳೂರು: ಸ್ವಿಗ್ಗಿ ಹಾಗೂ ಜೊಮ್ಯಾಟೋಗಳಂತಹ ಆನ್ಲೈನ್ ಆ್ಯಪ್ಗಳಿಂದ ಮುಂದಿನ ದಿನಗಳಲ್ಲಿ ಹೋಟೆಲ್ ಮಾಲೀಕರು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.
ನಗರದ ಬಂಟರ ಸಂಘದಲ್ಲಿ ನಡೆದ ಬಂಟರಾತಿಥ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸ್ವಿಗ್ಗಿ ಹಾಗೂ ಜೊಮ್ಯಾಟೋ ಆನ್ಲೈನ್ ಆ್ಯಪ್ಗಳಿಂದ ಸದ್ಯದ ಪರಿಸ್ಥಿತಿಯಲ್ಲಿ ಲಾಭವಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಹೋಟೆಲ್ ಮಾಲೀಕರು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಸ್ವಿಗ್ಗಿ , ಜೊಮ್ಯಾಟೋ ಕಂಪನಿಗಳು ಕಿಚನ್ ಹೆಸರಿನಲ್ಲಿ ಗ್ರಾಹಕರಿಗೆ ಪ್ರತಿಷ್ಠಿತ ಹೋಟೆಲ್ಗಳ ಆಹಾರವನ್ನು ಅವೇ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿವೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಹೋಟೆಲ್ ಮಾಲೀಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಂಟ ಸಮುದಾಯದ ಹೋಟೆಲ್ ಮಾಲೀಕರಿಗೆ ಕಿವಿಮಾತು ಹೇಳಿದರು.
ಬೆಂಗಳೂರು ಬಂಟರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ ಮಾತನಾಡಿ, ನಾವು ನಮ್ಮ ಹೋಟೆಲ್ಗಳಿಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ್ದೇವೆ. ಆರಂಭದಲ್ಲಿ ಕಮಿಷನ್ ಕೊಟ್ಟರೆ ಸಾಕು ಎಂದು ಸ್ವಿಗ್ಗಿ ಮತ್ತು ಜೊಮ್ಯಾಟೋದವರು ಕೆಲವು ಹೋಟೆಲ್ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈಗ ಶೇ. 28ರಷ್ಟು ಕಮಿಷನ್ ಕೇಳುತ್ತಿದ್ದಾರೆ. ಅಲ್ಲದೆ ಅವರು ಕಿಚನ್ ಆರಂಭಿಸಿದ್ದು, ನಮ್ಮ ಪ್ರತಿಷ್ಠಿತ ಹೋಟೆಲುಗಳ ಆಹಾರವನ್ನು ನಕಲು ಮಾಡಿ ಗ್ರಾಹಕರಿಗೆ ಪೂರೈಸುತ್ತಿದ್ದಾರೆ. ಇದರಿಂದ ನಮಗೆ ತುಂಬಾ ನಷ್ಟವಾಗುತ್ತಿದೆ ಎಂದರು.