ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಮೆಟ್ರೋ ಸಿಟಿ, ಗ್ರೀನ್‌ಸಿಟಿ, ಅಂತ ಕರೆಯೋದು ಕೇವಲ ಹೆಸರಿಗೆ ಮಾತ್ರ ಅನಿಸುತ್ತೆ. ಯಾಕೆಂದರೆ ಸ್ವಚ್ಛ ಸರ್ವೇಕ್ಷಣ್ನಲ್ಲಿ ಈ ಬಾರಿಯೂ ಬಿಬಿಎಂಪಿಗೆ ಹಿನ್ನೆಡೆಯಾಗಿದೆ.
ಬೆಂಗಳೂರು ಎಷ್ಟು ಅಭಿವೃದ್ಧಿಯಾಗುತ್ತಿದಿಯೋ ಅಷ್ಟೇ ಸಮನಾಗಿ ಮೂಲಭೂತ ಸೌಕರ್ಯಗಳ ಕೊರತೆ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಮೂಲ ಉದಾಹರಣೆ ಅಂದರೆ ಈಗ ಕೇಂದ್ರ ಸರ್ಕಾರ ನಡೆಸಿರುವ ಸ್ವಚ್ಛ ಸರ್ವೇಕ್ಷಣಾ ವರದಿಯೇ ಸಾಕ್ಷಿಯಾಗಿದೆ.
ಕಳೆದ ವರ್ಷ ರ‍್ಯಾಂಕಿಂಗ್ ಪಟ್ಟಿಯಲ್ಲಿ 194ನೇ ಸ್ಥಾನದಲ್ಲಿದ್ದ ಬೆಂಗಳೂರು, ಈ ಬಾರಿ 214ನೇ ಸ್ಥಾನಕ್ಕೆ ಕುಸಿದಿದೆ. ಪ್ರತಿ ವರ್ಷ ನಗರಗಳ ಸ್ವಚ್ಛತೆ ಹಾಗೂ ಕಸವಿಲೇವಾರಿ ಮಾನದಂಡಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ಸ್ವಚ್ಛ ಸರ್ವೇಕ್ಷಣ್ ಅಭಿಯಾನದಡಿ ಪ್ರಶಸ್ತಿ ಮತ್ತು ರ‍್ಯಾಂಕಿಂಗ್ ನೀಡುತ್ತದೆ. ಬೆಂಗಳೂರು ಈ ಬಾರಿಯೂ ಹಿನ್ನೆಡೆ ಸಾಧಿಸುವುದರ ಜೊತೆಗೆ ಕಳೆದ ವರ್ಷಕ್ಕಿಂತ 20 ರ‍್ಯಾಂಕ್ ಹಿನ್ನೆಡೆ ಸಾಧಿಸಿದೆ.
ಇನ್ನೂ ಕ್ಲೀನ್ ಸಿಟಿ ಮತ್ತು ಸ್ಮಾಟ್೯ ಸಿಟಿ ಯೋಜನೆಯಲ್ಲಿ ಬೆಂಗಳೂರಿಗೆ ಸಾವಿರಾರು ಕೋಟಿ ಹರಿದು ಬರುತ್ತಿದ್ದರೂ, ನಗರವನ್ನ ಸ್ವಚ್ಚವಾಗಿಡಲು ಸಾಧ್ಯವಾಗ್ತಿಲ್ಲ. ಯಾಕೆಂದರೆ ಬೇರೆ ನಗರಗಳಿಗಿಂತ ನಮ್ಮ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನ ಸಂದಣಿ ಹೊಂದಿರುವುದೇ ಕಾರಣ. ಸರಿಯಾಗಿ ನಿರ್ವಹಣೆ ಸಾಧ್ಯವಾಗುತ್ತಿಲ್ಲ.
ಪಾಲಿಕೆಗೆ ಸುಸ್ಥಿರ ನಗರ ಪ್ರಶಸ್ತಿ:
ಇತ್ತ ರ್ಯಾಂಕಿಂಗ್ನಲ್ಲಿ ಕಳಪೆ ಸಾಧನೆಯ ನಡುವೆಯೂ ಪಾಲಿಕೆಗೆ ಬೆಸ್ಟ್ ಸಸ್ಟೈನಬಲ್ ಸಿಟಿ (ಸುಸ್ಥಿರ ನಗರ) ಎಂಬ ಪ್ರಶಸ್ತಿ ಸಿಕ್ಕಿದೆ. 10 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇರುವ ಆಯ್ದ 47 ನಗರಗಳನ್ನು ಪಟ್ಟಿ ಮಾಡಿ ಕಸ ವಿಲೇವಾರಿ ಹಾಗೂ ನಿರ್ವಹಣೆಗೆ ಈ ನಗರಗಳು ಅಳವಡಿಸಿಕೊಂಡಿರುವ ವಿಧಾನ ಮತ್ತು ಪ್ರಯತ್ನವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 47 ನಗರಗಳಲ್ಲಿ ಪಾಲಿಕೆಗೆ 37ನೇ ರ‍್ಯಾಂಕ್ ಲಭ್ಯವಾಗಿರೋದಕ್ಕೆ ಸಂತಸ ಪಡಬೇಕಾಗಿದೆ.