ಬೆಂಗಳೂರು: ಮೊನ್ನೆ-ಮೊನ್ನೆಯಷ್ಟೇ ಉಗ್ರರು ಭಾರತದೊಳಗೆ ನುಸುಳಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿತ್ತು. ಈ ಮಧ್ಯೆ, ಇಂದು ಸಿಲಿಕಾನ್ ಸಿಟಿಯ ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಶಂಕಾಸ್ಪದ ಸೂಟ್ಕೇಸ್ ಪತ್ತೆಯಾಗಿದೆ.
ಮೆಟ್ರೊ ನಿಲ್ದಾಣದ ಎಕ್ಸಿಟ್ ಗೇಟ್ ಬಳಿ ಸಂಶಯ ಮೂಡಿಸುವ ಟ್ರಾಲಿ ಲಗೇಜ್ ಬ್ಯಾಗ್‌ವೊಂದು ಬಿಎಂಆರ್ಸಿಎಲ್ನ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಬಿದ್ದಿದೆ. ಆಗ ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷಿಸಿದಾಗ, ಸೌಂಡ್ ಬ್ಲಿಂಕ್ ಆಗಿದೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೆಟ್ರೋ ಸ್ಟೇಷನ್‌ಗೆ ಪೊಲೀಸರು, ಶ್ವಾನ ದಳ ಹಾಗು ಬಾಂಬ್ ಡಿಟೆಕ್ಷನ್ ಫೋರ್ಸ್ ಬಂದು ಬ್ಯಾಗ್ ಪರಿಶೀಲಿಸಿದರು.
ಅನುಮಾನಾಸ್ಪದ ಬ್ಯಾಗ್ ಅನ್ನು ವಿವಿಧ ರೀತಿಯಲ್ಲಿ ಪರಿಶೀಲಿಸಲಾಗಿತ್ತು. ಆಗ ಅದು ಬಾಂಬ್ ಬ್ಯಾಗ್ ಅಲ್ಲ. ಬರೇ ಬಟ್ಟೆಗಳಿದ್ದ ಲಗೇಜ್ ಬ್ಯಾಗ್ ಅನ್ನೋದು ಗೊತ್ತಾಗಿದೆ. ಜೊತೆಗೆ ಬಾಂಬ್ ಡಿಟೆಕ್ಷನ್ ಫೋರ್ಸ್ ಕೂಡ ಆ ಬ್ಯಾಗ್‌ನಲ್ಲಿ ಯಾವುದೇ ಸ್ಫೋಟಕಗಳಿಲ್ಲ ಎಂದು ತಿಳಿಸಿತ್ತು.
ಬ್ಯಾಗ್ ಬಿಟ್ಟು ಮೊಬೈಲ್ ಚಾರ್ಜರ್ ತರಲು ಹೋಗಿದ್ದ ಮಹಿಳೆ:
ಬ್ಯಾಗ್ ಇಟ್ಟು ಹೋಗಿದ್ದವರು ದಿನೇಶ್ ಎಂಬುವರ ಪತ್ನಿ. ಒಡಿಶಾ ಮೂಲದ ದಿನೇಶ್ ದಂಪತಿ ಬೈಯ್ಯಪ್ಪನಹಳ್ಳಿ ಬಳಿಯ ಕೃಷ್ಣಯ್ಯಪಾಳ್ಯದಲ್ಲಿ ವಾಸವಿದ್ದರು. ಇತ್ತೀಚೆಗೆ ದಿನೇಶ್ ಪಬ್ಜಿ ಹುಚ್ಚಿಗೆ ಬಿದ್ದು, ಪತ್ನಿ ಜೊತೆ ಕಿರಿಕ್ ಮಾಡುತ್ತಿದ್ದರಂತೆ. ಇದರಿಂದ ರೋಸಿ ಹೋಗಿದ್ದ ಪತ್ನಿ, ಇಂದು ಲಗೇಜ್ ಸಮೇತ ಒಡಿಶಾಗೆ ಹೊರಟಿದ್ದರು. ಮೆಟ್ರೊ ಮೂಲಕ ಮೆಜೆಸ್ಟಿಕ್ಗೆ ಹೋಗಲು ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಅವರು ಬಂದಿದ್ದರು. ಮೊಬೈಲ್ ಚಾರ್ಜರ್ ಮರೆತು ಬಂದಿದ್ದ ದಿನೇಶ್ ಪತ್ನಿ ಅದನ್ನು ತರಲು ಮನೆಗೆ ಹೋಗಿದ್ದಾರೆ.
ಆದರೆ ಗರ್ಭಿಣಿಯಾಗಿದ್ದ ಆಕೆಗೆ ಲಗೇಜ್ ಅನ್ನು ಪುನಃ ತೆಗೆದುಕೊಂಡು ಹೋಗಲು ಆಗಿರಲಿಲ್ಲ. ಹೀಗಾಗಿ, ಮೆಟ್ರೋ ನಿಲ್ದಾಣದ ಸಿಸಿಟಿವಿ ಹುಡುಕಾಡಿ, ಸಿಸಿಟಿವಿ ಕವರ್ ಆಗುವ ಕಡೆ ಲಗೇಜ್ ಬ್ಯಾಗಿಟ್ಟು ಅವರು ಹೋಗಿದ್ದರು. ಇದನ್ನು ಮಾನಿಟರ್ ಮೂಲಕ ಪರಿಶೀಲಿಸಿದ್ದ ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿ ಆಕೆ ಸಿಸಿಟಿವಿ ಹುಡುಕಾಟ ನಡೆಸಿರುವ ಬಗ್ಗೆ ಅನುಮಾನಪಟ್ಟು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಬೈಯ್ಯಪ್ಪನಹಳ್ಳಿ ಪೊಲೀಸರು ದಿನೇಶ್ ದಂಪತಿಯನ್ನು ಪತ್ತೆ ಮಾಡಿ, ಮಾಹಿತಿ ಪಡೆದಿದ್ದಾರೆ. ಅಲ್ಲದೇ ಡಿಸಿಪಿ ಶರಣಪ್ಪ ದಂಪತಿಗೆ ಕಿತ್ತಾಡದಂತೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ಸ್ಟೇಷನ್‌ನಲ್ಲಿ ಅನುಮಾನಾಸ್ಪದ ಸೂಟ್ಕೇಸ್ ಪತ್ತೆ..!