ಬೆಂಗಳೂರು: ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜಿನಲ್ಲಿ ಮೊಬೈಲ್ ಫೋನ್ 'NOT allowed' ಆಗಿತ್ತು. ಆದರೆ ಇದೀಗ ಮೊಬೈಲ್ ಇಲ್ಲದೇ ಶಿಕ್ಷಣವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಮಹಾಮಾರಿ ಶಿಕ್ಷಣ ಪದ್ಧತಿಯನ್ನೇ ಬದಲಿಸಿ ಹಾಕಿದೆ. ಆದರೆ ಇದರಿಂದ ವಿದ್ಯಾರ್ಥಿಗಳಲ್ಲಿ ಭವಿಷ್ಯದ ಭೀತಿ ಎದುರಾಗಿದೆ.
ಕೊರೊನಾ ಪಾಸಿಟಿವಿಟಿ ರೇಟ್ ಶೇ.2.05 ರಷ್ಟು ಇದ್ದು ನಿತ್ಯ 3 ರಿಂದ 4 ಸಾವಿರ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗ್ತಿವೆ. ಈಗಾಗಲೇ ಮೊದಲ ಮತ್ತು ಎರಡನೇ ಅಲೆಯಿಂದ ತತ್ತರಿಸಿರುವ ರಾಜ್ಯದಲ್ಲಿ ಮೂರನೇ ಅಲೆಯ ಭೀತಿ ಎದುರಾಗಿದೆ.
ಮೂರನೇ ಅಲೆಯಲ್ಲಿ ಮಕ್ಕಳಲ್ಲೇ ಸೋಂಕು ಅಧಿಕವಾಗಿ ಹರಡಬಹುದು ಎಂಬ ಕಾರಣಕ್ಕೆ ಜುಲೈ 1 ರಿಂದ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಆದರೆ ಈ ಆನ್ಲೈನ್ ಶಿಕ್ಷಣಕ್ಕೆ ಗ್ರಾಮೀಣ ಭಾಗದಲ್ಲಿ ವಿರೋಧವಿದ್ದು, ಪಾಳಿ ಪದ್ಧತಿಯಲ್ಲಿ ಅಥವಾ ವಿದ್ಯಾಗಮ ತರಗತಿ ಆರಂಭಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಬಿಹಾರ, ಆಂಧ್ರ ಪ್ರದೇಶ ಮಾದರಿಯಲ್ಲಿಯಾದರೂ ಶಾಲೆ ಆರಂಭಿಸಬೇಕು. ಆನ್ಲೈನ್ ಶಿಕ್ಷಣ ಮುಂದುವರೆದರೆ ಗುಣಮಟ್ಟದ ಶಿಕ್ಷಣಕ್ಕೆ ಪೆಟ್ಟು ಬಿದ್ದಂತೆ ಆಗುತ್ತದೆ. ಇದರಿಂದ ಮಕ್ಕಳ ಶಿಕ್ಷಣ ಕಿತ್ತುಕೊಂಡಂತೆ ಆಗುತ್ತದೆ ಎಂಬ ವಾದಗಳು ಕೇಳಿಬಂದಿವೆ.
ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತ:
ಈ ಆನ್ಲೈನ್ ತರಗತಿಗಳು ಹಲವು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಿವೆ. ಕಳೆದ 10 ತಿಂಗಳಿಗೂ ಹೆಚ್ಚು ಕಾಲ ಶಾಲೆಗಳು ಮತ್ತು ಭೌತಿಕ ತರಗತಿಗಳು ಬಂದ್ ಆಗಿವೆ. ಆನ್ಲೈನ್ ಮೂಲಕ ಶಿಕ್ಷಣ ಕೊಟ್ಟರೂ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕಳೆದ 2020-21ನೇ ಸಾಲಿನ ಶೈಕ್ಷಣಿಕ ವರ್ಷವೇ ಇದಕ್ಕೆ ಉದಾಹರಣೆಯಾಗಿದೆ.
1 ರಿಂದ 10ನೇ ತರಗತಿವರೆಗಿನ ಮಕ್ಕಳ ಆನ್ಲೈನ್ ಕ್ಲಾಸ್ ಬಗ್ಗೆ ನಡೆಸಿದ ಸರ್ವೆಯಲ್ಲಿ ಆತಂಕಕಾರಿ ವಿಷಯ ಬಯಲಾಗಿದೆ. ರಾಜ್ಯದಲ್ಲಿ 10,50,9367 ವಿದ್ಯಾರ್ಥಿಗಳು ಇದ್ದು, ಇದರಲ್ಲಿ ಶಿಕ್ಷಣ ಇಲಾಖೆಯ SATs ವೆಬ್ ಸೈಟ್ ನಲ್ಲಿ ಅಧಿಕೃತವಾಗಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 93,01,805 ರಷ್ಟು ಇದೆ. ಇದರಲ್ಲಿ ಶೇ.60 ರಷ್ಟು ವಿದ್ಯಾರ್ಥಿಗಳ ಬಳಿ ಆನ್ಲೈನ್ ಶಿಕ್ಷಣ ಸೌಲಭ್ಯವಿದ್ದರೆ, ಉಳಿದ ಶೇ.40 ರಷ್ಟು ಮಕ್ಕಳಿಗೆ ಆನ್ಲೈನ್ ಶಿಕ್ಷಣ ಕೈಗೆಟಕುತ್ತಿಲ್ಲ.
ಇಲಾಖೆ ನಡೆಸಿದ ಸರ್ವೆಯಲ್ಲಿ ಕಲಿಕೆಯಿಂದ ದೂರ ಉಳಿದ ಮಕ್ಕಳ ಮಾಹಿತಿ ತಿಳಿದು ಬಂದಿದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಲಾಗಿದೆ. 79,03,329 ರಷ್ಟು ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡಿದ್ದರೆ, ಸುಮಾರು 14 ಲಕ್ಷಕ್ಕೂ ಹೆಚ್ಚು ಮಕ್ಕಳ ಬಳಿ ಮೊಬೈಲ್ ಇಲ್ಲದೇ ಇರುವುದು ಕಂಡು ಬಂದಿದೆ.
ಈ ಪೈಕಿ ಸ್ಮಾರ್ಟ್ ಫೋನ್ 58,59,907 ಜನ ಬಳಸಿದ್ದರೆ 21 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಬೇಸಿಕ್ ಸೆಟ್ ಇದೆ. 37,79,965 ವಿದ್ಯಾರ್ಥಿಗಳ ಬಳಿ ಮೊಬೈಲ್ ಇದ್ದರೂ ಇಂಟರ್ನೆಟ್ ಸೇವೆ ಇಲ್ಲ. 81,14,097 ವಿದ್ಯಾರ್ಥಿಗಳು ದೂರದರ್ಶನ (ಟಿವಿ), 10,45,288 ವಿದ್ಯಾರ್ಥಿಗಳು ರೇಡಿಯೋ ಮೂಲಕ ಶಿಕ್ಷಣ ಪಡೆದಿದ್ದಾರೆ. ಆದರೆ 8,65,259 ವಿದ್ಯಾರ್ಥಿಗಳು ಟಿವಿ, ರೇಡಿಯೋ ಇಲ್ಲದೇ ಶಿಕ್ಷಣ ಸಿಗದೇ ವಂಚಿತರಾಗಿದ್ದಾರೆ. ಒಟ್ಟಾರೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಲಕ್ಷಾಂತರ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ.