ಬೆಂಗಳೂರು: ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರ ಕಡೆಯ ದಿನಗಳನ್ನು ಎಣಿಸುತ್ತಿದೆ. ಈ ಸರ್ಕಾರವು ಸಾರ್ವಜನಿಕರ ಹಣವನ್ನು ಸಂಪೂರ್ಣ ಲೂಟಿ ಮಾಡುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದರು. ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಮತ್ತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಪೇಸಿಎಂ ಎಂಬ ಹ್ಯಾಷ್ ಟ್ಯಾಗ್ ಹಾಕಿಕೊಳ್ಳಬೇಕು. ರಾಜ್ಯದ ಬಿಜೆಪಿ ಸರ್ಕಾರವು ಸುಳ್ಳು ಭರವಸೆಗಳ ಮೂಲಕ ಜನರನ್ನು ವಂಚಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಸಮರ್ಪಕ ಉದ್ಯೋಗ ಸೃಷ್ಟಿಸಿಲ್ಲ: 2019ರಲ್ಲಿ 600 ಭರವಸೆ ನೀಡಿದ್ದ ಬಿಜೆಪಿ ಸರ್ಕಾರ, ಶೇ.91ರಷ್ಟು ಬೇಡಿಕೆಗಳನ್ನು ಈಡೇರಿಸಿಲ್ಲ ಯಾಕೆ? ರೈತರಿಗೆ ನೀಡಿದ 112ರ ಪೈಕಿ 97 ಬೇಡಿಕೆಗಳನ್ನು ಈಡೇರಿಸಿಲ್ಲ ಏಕೆ? ರಾಜ್ಯದ ಮಹಿಳೆಯರಿಗೆ ನೀಡಿದ 24ರ ಪೈಕಿ 22 ಭರವಸೆ ಯಾಕೆ ಈಡೇರಿಸಿಲ್ಲ? ಯುವಕರಿಗೆ ನೀಡಿದ 18 ಭರವಸೆಗಳಲ್ಲಿ 17 ಬೇಡಿಕೆನ್ನೂ ಈಡೇರಿಸಿಲ್ಲ. ಸಮರ್ಪಕ ಉದ್ಯೋಗಗಳನ್ನು ಸೃಷ್ಟಿ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
3 ಸಾವಿರ ಕೋಟಿ ರೂ. ಶಿಕ್ಷಣಕ್ಕೆ ನೀಡಿ, ಒಂದು ರೂಪಾಯಿ ಕೂಡಾ ಖರ್ಚು ಮಾಡಿಲ್ಲ. 4,500 ಕೋಟಿ ರೂ. ಮೊತ್ತದ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದ ಪ್ರತಿಭಾ ಪುರಸ್ಕಾರ ಈಡೇರಿಸಿಲ್ಲ. ವಸತಿಗೆ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂಬುದೂ ಸೇರಿದಂತೆ ನಮ್ಮ ಈ 6 ಪ್ರಶ್ನೆಗೆ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರ ಈ 10 ಪ್ರಶ್ನೆಗಳಿಗೆ ಉತ್ತರಿಸಲಿ: ಬೊಮ್ಮಾಯಿ ಸರ್ಕಾರ ಕಳೆದ ಬಾರಿ ಬಜೆಟ್ನಲ್ಲಿ ನೀಡಿದ ಭರವಸೆಯನ್ನೂ ಈಡೇರಿಸಿಲ್ಲ. ಈಗ ಹೊಸ ಬಜೆಟ್ ಮಂಡಿಸಲು ಹೊರಟಿದ್ದಾರೆ. ಹೊಸದಾಗಿ ಬಜೆಟ್ ಮಂಡಿಸುತ್ತಿರುವ ಬೊಮ್ಮಾಯಿಗೆ 10 ಪ್ರಶ್ನೆ ಕೇಳುತ್ತೇವೆ. ನಮ್ಮ ಕ್ಲಿನಿಕ್ ಆರಂಭ, ಕಲ್ಯಾಣ ಕರ್ನಾಟಕಕ್ಕೆ ಘೋಷಿಸಿದ್ದ ಹಣ ಯಾಕೆ ಬಳಸಿಕೊಂಡಿಲ್ಲ? ಒಕ್ಕಲಿಗ ಅಭಿವೃದ್ಧಿ ಹಾಗೂ ಬಿಲ್ಲವ ಕೋಶಕ್ಕೆ ನೀಡಿದ್ದ ಅನುದಾನ ಬಿಡುಗಡೆ ಯಾಕೆ ಮಾಡಿಲ್ಲ? ಪಂಚಮಸಾಲಿ ಲಿಂಗಾಯಿತರಿಗೆ ನೀಡಿದ ಭರವಸೆ ಇನ್ನೂ ಈಡೇರಿಲ್ಲ? ಮೀಸಲಾತಿ ಭರವಸೆ ಈಡೇರಿಸಿಲ್ಲ. ಗೋವಾದಲ್ಲಿ ಯಾಕೆ ಕನ್ನಡ ಭವನ ನಿರ್ಮಾಣವಾಗಿಲ್ಲ? ನಾಳಿನ ಬೊಮ್ಮಾಯಿ ಅವರ ಸುಳ್ಳು ಬಜೆಟ್ನ್ನು ಈಗಾಗಲೇ ನಾಡಿನ ಜನ ತಿರಸ್ಕರಿಸಿದ್ದಾರೆ ಎಂದು ಸುರ್ಜೇವಾಲ.
ಬಸವರಾಜ ಸುಳ್ಳಿನ ಸರದಾರ: ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮಾತನಾಡಿ, ಬಸವರಾಜ ಸುಳ್ಳಿನ ಸರದಾರ. ಅವರು ನೀಡಿದ ಭರವಸೆ ಈಡೇರಿಸದಿದ್ದರೆ, ಬೆನ್ನಿಗೆ ಚೂರಿ ಹಾಕಿದಂತೆ ಆಗಲಿದೆ. ಸರ್ಕಾರ ಜನ ವಿರೋಧಿಯಾಗಿದೆ. ಬಸವರಾಜ ಬೊಮ್ಮಾಯಿ ಅವರ ಸುಳ್ಳಿನ ಬಜೆಟ್ ಮಂಡನೆಯಾಗುವ ಮುನ್ನವೇ ರಾಜ್ಯದ ಜನತೆ ತಿರಸ್ಕಾರ ಮಾಡಿದ್ದಾರೆ ವಾಗ್ದಾಳಿ ನಡೆಸಿದರು.
ಮೀಸಲಾತಿ ವಿಚಾರ ಗೊಂದಲಮಯ: ಕೇಂದ್ರದ ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಬಂದ ಮೇಲೆ ಬಿಜೆಪಿ ಸರ್ಕಾರವು ರಾಜ್ಯ ಜನರನ್ನು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಮಿಕರು ಬೀದಿಪಾಲಾಗಿದ್ದಾರೆ. ಕೋಮು ಗಲಭೆಯಲ್ಲಿ ಅಲ್ಪಸಂಖ್ಯಾತರು ನೆಮ್ಮದಿ ಕಳೆದುಕೊಂಡಿದ್ದಾರೆ. ಒಟ್ಟಾರೆ ರಾಜ್ಯದ ನೆಮ್ಮದಿ ಹಾಳಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಗೊಂದಲಮಯವಾಗಿದೆ ಎಂದು ಕಿಡಿಕಾರಿದರು.
ಮೀಸಲಾತಿಯನ್ನು ಜಾರಿಗೆ ತಂದವರು ನಾವು: ಈ ಮೀಸಲಾತಿಯನ್ನು ನಾಗಮೋಹದಾಸ್ ಸಮಿತಿ ರಚಿಸಿ ಜಾರಿಗೆ ತಂದವರು ನಾವು. ನಮ್ಮ ಸರ್ಕಾರದ ಅವಧಿ ಮುಗಿಯುವ ಸಂದರ್ಭದಲ್ಲಿ ಈ ವರದಿ ಕೈ ಸೇರಿದ್ದರಿಂದ ಜಾರಿಗೆ ತರಲು ಸಾಧ್ಯವಾಗಲಿಲ್ಲ. ಒಂಬತ್ತನೇ ಅನುಸೂಚಿ ವ್ಯಾಪ್ತಿಗೆ ಇದನ್ನು ತರುವ ನಿಟ್ಟಿನಲ್ಲಿ ಅಂದ್ರೆ, ಪಾರ್ಲಿಮೆಂಟ್ನಲ್ಲಿ ತಂದು ಜಾರಿಗೊಳಿಸುವ ಕಾರ್ಯವನ್ನು ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಮಾಡಬೇಕು.
ಆಗ ನಿಜವಾದ ನ್ಯಾಯ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಿಗಲು ಸಾಧ್ಯ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ಎಸ್ಎಂ ಕೃಷ್ಣ ಸಿಎಂ ಆಗಿದ್ದಾಗ ಒಂದು ನಿಯೋಗ ಮಾಡಿದ್ದರು. ಇದೀಗ ಈ ಸಿದ್ಧ ರೂಪದ ವ್ಯವಸ್ಥೆಯನ್ನು ಬಳಸಿಕೊಂಡು ಬಿಜೆಪಿ ಸರ್ಕಾರ ತಾವೇ ಈ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ವರದಿ ಕೊಯ್ಲಿದ್ದರೂ ಮೂರು ವರ್ಷ ಅಧಿಕಾರದಲ್ಲಿದ್ದ ಸಂದರ್ಭ ಯಾಕೆ ಜಾರಿಗೆ ತರಲು ಮುಂದಾಗಿಲ್ಲ ಎಂದು ಗರಂ ಆದರು.
ನಾವು ನುಡಿದಂತೆ ನಡೆದಿದ್ದೇವೆ: ನಾವು ಎಲ್ಲಾ ಸಮಾಜಕ್ಕೂ ಸಮಾನತೆ ನೀಡುವ ಭರವಸೆ ಕೊಟ್ಟಿದ್ದೇವೆ. ಅತ್ಯಂತ ವ್ಯವಸ್ಥಿತವಾಗಿ ನಾವು ಹಿಂದುಳಿದ ಹಾಗೂ ತುಳಿತಕ್ಕೊಳಗಾದ ಸಮಾಜದವರ ಅಭಿವೃದ್ಧಿಗೆ ಮುಂದಾಗಿದ್ದೇವೆ. ಪ್ರಣಾಳಿಕೆಯಲ್ಲಿ ನಾವು ಎಲ್ಲಾ ಅಂಶವನ್ನು ತಂದು ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಜಾರಿಗೆ ತರುತ್ತೇವೆ. ಹಿಂದುಳಿದ ವರ್ಗದವರಿಗೆ ಅನುಕೂಲ ಏನಾರು ಆಗಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದು ಹೇಳಲು ಬಯಸುತ್ತೇನೆ. ನಾವು ನುಡಿದಂತೆ ನಡೆದಿದ್ದೇವೆ ಮತ್ತು ಎಲ್ಲಾ ಕಾರ್ಯಕ್ರಮವನ್ನು ಮಾಡುತ್ತೇವೆ ಎಂಬ ಭರವಸೆಯನ್ನು ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು: ಸಚಿವ ಅಶ್ವತ್ಥನಾರಾಯಣ್ ವಿವಾದ