ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ರಾಜ್ಯದ ಕಾರ್ಯಪಡೆ ಸಲ್ಲಿಸಿರುವ ವರದಿಗೆ ಸಚಿವ ಸಂಪುಟ ತಾತ್ವಿಕ ಅನುಮೋದನೆ ನೀಡಿದ್ದು, ಇದು ಶಾಲಾ ಶಿಕ್ಷಣದಲ್ಲಿ ಹೊಸ ಶಕೆಗೆ ನಾಂದಿಯಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅವರು, ಕರ್ನಾಟಕ ಶಿಕ್ಷಣ ಆಯೋಗ ಸ್ಥಾಪನೆ ಸೇರಿದಂತೆ ಶಾಲಾ ಆಡಳಿತ, ನಿಯಂತ್ರಣ ನಿರ್ಣಯಗಳನ್ನು ತೆಗೆದುಕೊಳ್ಳುವಿಕೆ ಮತ್ತು ಶೈಕ್ಷಣಿಕ ಆಯಾಮಗಳ ಕುರಿತು ಮೌಲ್ಯಮಾಪನಗಳಿಗಾಗಿ ಸ್ವತಂತ್ರ ಸಂಸ್ಥೆಗಳ ಸ್ಥಾಪನೆ ಸೇರಿದಂತೆ ಹಲವು ವೈಶಿಷ್ಟ್ಯಗಳ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಶಾಲಾ ಶಿಕ್ಷಣದ ಚಿತ್ರಣವನ್ನೇ ಸಂಪೂರ್ಣವಾಗಿ ಪರಿವರ್ತಿಸಲಿದ್ದು, ಶಾಲಾಡಳಿತ ಮತ್ತು ಶೈಕ್ಷಣಿಕ ಆಯಾಮಗಳಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಲಿದೆ ಎಂದಿದ್ದಾರೆ.
ಓದಿ: ವಿಧಾನ ಪರಿಷತ್ನಲ್ಲಿ ಮತ್ತೆ ಮಂಡನೆಯಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ
ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಶಾಲಾ ಶಿಕ್ಷಣ ಕೌನ್ಸಿಲ್ (ಕೆಎಸ್ಇಸಿ) ಮತ್ತು ಸ್ಟೇಟ್ ಸ್ಕೂಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (ಎಸ್ಎಸ್ಎಸ್ಎ) ಸ್ಥಾಪನೆ, ಡಿಎಸ್ಇಆರ್ಟಿ ಪುನರ್ವಿನ್ಯಾಸ, ಆದರ್ಶ, ಮೊರಾರ್ಜಿ, ಕೆಜಿಬಿವಿ, ಕೆಪಿಎಸ್ ಮುಂತಾದ ಶಾಲಾ ಮಾದರಿಗಳನ್ನು ಶಾಲಾ ಸಂಕೀರ್ಣಗಳಾಗಿ ಬದಲಾವಣೆ, ವಿಶೇಷ ಶೈಕ್ಷಣಿಕ ವಲಯಗಳ –ಎಸ್ ಇ ಝಡ್ ಸ್ಥಾಪನೆ, ದಿವ್ಯಾಂಗ ವಿದ್ಯಾರ್ಥಿ ವೇತನ, ಶಿಕ್ಷಕರ ನೇಮಕಾತಿ, ಸೇವಾ ನಿಯಮಗಳು ಮತ್ತು ವೃತ್ತಿ ಪ್ರಗತಿಗಾಗಿ ಸೇವಾ ನಿಯಮಗಳ ಬದಲಾವಣೆ, ಗುರುಚೇತನ ಮಾದರಿಯನ್ನು ನಿರಂತರ ವೃತ್ತಿ ಅಭಿವೃದ್ಧಿಗಾಗಿ ವೇದಿಕೆಯನ್ನಾಗಿ ಬಳಸಿಕೊಳ್ಳುವುದು ಸೇರಿದಂತೆ ಹಲವಾರು ಮಾರ್ಪಾಡುಗಳನ್ನು ಮಾಡಲು ಸಂಪುಟ ಅನುಮೋದನೆ ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.