ಬೆಂಗಳೂರು: ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ಕುರಿತು ತೀರ್ಪು ಪ್ರಕಟವಾಗಲಿದೆ. ಇದಕ್ಕೂ ಮುನ್ನ ಈಗಾಗಲೇ ಅನರ್ಹ ಶಾಸಕರಾದ ಎಸ್.ಟಿ. ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜ್ ದೆಹಲಿಗೆ ದೌಡಾಯಿಸಿದ್ದಾರೆ.
ನಾಳೆ ಅನರ್ಹರ ಕುರಿತು ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುವ ಸಾಧ್ಯತೆ ಹಿನ್ನಲೆ ಅನರ್ಹರಲ್ಲಿ ಗಲಿಬಿಲಿ ಹೆಚ್ಚಾಗಿದೆ. ಹಾಗಾಗಿ ಇಂದೇ ದೆಹಲಿಯಲ್ಲಿ ತಮ್ಮ ವಕೀಲರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರ ಕೋರ್ಟ್ ಕಲಾಪದಲ್ಲಿ ಭಾಗವಹಿಸಲಿರುವ ಅನರ್ಹರು, ದೆಹಲಿಗೆ ಹೊರಡುವ ಮುನ್ನ ಸಿಎಂ ಯಡಿಯೂರಪ್ಪ ಜತೆ ದೂರವಾಣಿ ಕರೆ ಮೂಲಕ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರಿಗೆ ಧೈರ್ಯ ತುಂಬಿರುವ ಸಿಎಂ ಕೋರ್ಟ್ ತೀರ್ಪು ಬಗ್ಗೆ ಭರವಸೆ ನೀಡಿದ್ದು, ಅನರ್ಹರಿಗೆ ಅಭಯ ನೀಡಿದ್ದಾರೆ ಎಂದು ಹೇಳಲಾಗ್ತಿದೆ.
ಇಂದೇ ತಮ್ಮ ಪರ ವಕೀಲರನ್ನು ಭೇಟಿಯಾಗಿ ಕಾನೂನಾತ್ಮಕ ನಡೆ ಕುರಿತು ಅನರ್ಹರು ಚರ್ಚೆ ನಡೆಸಲಿದ್ದಾರೆ. ನಾಳೆ ಸುಪ್ರೀಂ ತೀರ್ಪು ಅನರ್ಹರ ಭವಿಷ್ಯ ನಿರ್ಧರಿಸಲಿದ್ದು, ಪರವಾಗಿ ಬಂದರೆ ಚುನಾವಣಾ ಕಣ ರಂಗೇರಲಿದೆ. ನಾಮಪತ್ರ ಸಲ್ಲಿಕೆಗೆ ನ.18 ನೇ ತಾರೀಕು ಕೊನೆ ದಿನವಾಗಿರೋದ್ರಿಂದ, ಸುಪ್ರೀಂ ತೀರ್ಪಿಗಾಗಿ ಚಾತಕ ಪಕ್ಷಿಗಳಂತೆ ಅನರ್ಹರು ಕಾಯುತ್ತಿದ್ದಾರೆ.