ಬೆಂಗಳೂರು: ಮೂರು ತಿಂಗಳಿಗೊಮ್ಮೆ ನಡೆಯುವ ಕಾರ್ಯಕಾರಿಣಿ ಸಭೆ ಇಂದು ಬೆಂಗಳೂರಿನಲ್ಲಿ ನಡೆದಿದ್ದು, ಮುಂಬರಲಿರುವ ಚುನಾವಣೆ ಕಣ್ಮುಂದಿಟ್ಟುಕೊಂಡು ಪಕ್ಷ ಸಂಘಟನೆಯನ್ನು ವಿವಿಧ ಆಯಾಮದಲ್ಲಿ ನಡೆಸಬೇಕು ಎನ್ನುವ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಅರಮನೆ ಮೈದಾನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅ.11ರಿಂದ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ 50 ಕ್ಷೇತ್ರಗಳಿಗೆ ಪ್ರವಾಸ ಆರಂಭಿಸಲು ನಿಶ್ಚಯವಾಗಿದೆ. ಮೊದಲ ಹಂತದ ಪ್ರವಾಸ ಇದಾಗಿದ್ದು, ರಾಯಚೂರಿನಿಂದ ಆರಂಭಿಸಿ ಡಿ.25ರವರೆಗೆ ವಿಜಯಸಂಕಲ್ಪ ಯಾತ್ರೆಯಾಗಿ ನಡೆಯಲಿದೆ ಎಂದರು.
ಅದಕ್ಕೆ ಸಮಾನಾಂತರವಾಗಿ ಪಕ್ಷದ ಸಂಘಟನೆ ಮತ್ತಷ್ಟು ವಿಸ್ತರಣೆಗೆ ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್ ನೇತೃತ್ವದಲ್ಲಿ ಸಂಘಟನಾತ್ಮಕ ಪ್ರವಾಸ ಮಾಡಲಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ 100 ಕ್ಷೇತ್ರದಲ್ಲಿ ಮೊದಲ ಹಂತದ ಪ್ರವಾಸ ನಡೆಯಲಿದ್ದು, ಕಾರ್ಯಕರ್ತರ ಸಮಾವೇಶ, ಸಭೆ, ಫಲಾನುಭವಿಗಳ ಸಮಾವೇಶಕ್ಕೆ ನಿರ್ಧಾರ ಮಾಡಲಾಗಿದೆ ಎಂದರು.
ಬೇರೆ ಬೇರೆ ಆಯಾಮ ವಿಭಾಗಗಳಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಸಮಾವೇಶ ಮಾಡಬೇಕು ಎಂದು ನಿಶ್ಚಯವಾಗಿದ್ದು, ಕಲಬುರಗಿಯಲ್ಲಿ ಒಬಿಸಿ ಸಮಾವೇಶ, ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡ ಸಮಾವೇಶ, ಮೈಸೂರಿನಲ್ಲಿ ಪರಿಶಿಷ್ಟ ಜಾತಿ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ, ಶಿವಮೊಗ್ಗದಲ್ಲಿ ಯುವ ಮೋರ್ಚಾ ಸಮಾವೇಶ ನಡೆಸಲು ಕಾರ್ಯಕಾರಿಣಿಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದರು.
ಸದೃಢ ಕರ್ನಾಟಕ ಮಾಡುವ ನಿರ್ಧಾರ: ಡಿ.31ರೊಳಗೆ ಇದೆಲ್ಲ ಮುಗಿಯುವ ಗುರಿ ಇದ್ದು, ಪ್ರತಿ ಬೂತ್ನಿಂದ 5 ಜನರನ್ನು ಸಕ್ರಿಯಗೊಳಿಸುವ ನಿರ್ಧಾರವಾಗಿದೆ. ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮ, ಕೇಂದ್ರದ ಯೋಜನೆಗಳ ಫಲಾನುಭವಿಗಳನ್ನು ಪ್ರತಿ ಕ್ಷೇತ್ರದಲ್ಲಿ ಸೇರಿಸಿ ಮಾಹಿತಿ ನೀಡಬೇಕು. ಆ ಮೂಲಕ ಕಾಂಗ್ರೆಸ್ ಅಪಪ್ರಚಾರ ಹೋಗಲಾಡಿಸಬೇಕು ಎನ್ನುವ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲ ಸಮಾವೇಶಕ್ಕೆ ನಮ್ಮ ರಾಷ್ಟ್ರೀಯ ನಾಯಕರು ಬಂದು ಭಾಗವಹಿಸಲಿದ್ದಾರೆ. ಎರಡು ತಿಂಗಳಿನಲ್ಲಿ ವಿಜಯ ಸಂಕಲ್ಪದ ವಾತಾವರಣ ಸೃಷ್ಟಿಸಬೇಕು. ಸಶಕ್ತ ಭಾರತಕ್ಕೆ ಸದೃಢ ಕರ್ನಾಟಕ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಬದಲಾಗಲಿದೆ: ಕಾಂಗ್ರೆಸ್ ಪಾಂಚಜನ್ಯ ಯಾತ್ರೆ ಮಾಡಲಿ ಮತ್ತೊಂದು ಯಾತ್ರೆ ಮಾಡಲಿ ಬೇರೆ ಪಕ್ಷದ ಯಾತ್ರೆ ಬಗ್ಗೆ ನಮಗೆ ಚಿಂತೆ ಇಲ್ಲ. ನಾವು ನಮ್ಮ ಕಾರ್ಯಕ್ರಮ ಜನರನ್ನು ತಲುಪಲಿದ್ದೇವೆ. ಭಾರತ್ ಜೋಡೋ ಯಾತ್ರೆ ಯಾವುದೇ ಸ್ಪಷ್ಟತೆ ಇಲ್ಲದ ಯಾತ್ರೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಒಂದೊಂದು ಗುಂಪಾಗಿದ್ದು, ರಾಜ್ಯದಿಂದ ಭಾರತ್ ಜೋಡೋ ಯಾತ್ರೆ ಹೊರಹೋಗುವ ವೇಳೆಗೆ ಮೂರು ವಿಭಾಗಗಳಾಗಿ ಕಾಂಗ್ರೆಸ್ ಬದಲಾಗಲಿದೆ. ಭಾರತ್ ಜೋಡೋ, ಭಾರತ್ ತೋಡೋ ಯಾತ್ರೆಯಾಗಿ ಬದಲಾಗಲಿದೆ ಎಂದರು.
ಪೇಸಿಎಂ ಎಂಬುವುದು ಆಧಾರ ರಹಿತ ಆರೋಪ. ಆದರೆ, ನಮ್ಮ ಎರಡೂ ಸರ್ಕಾರ ಜನರಿಗೆ ಪೇ ಮಾಡಿವೆ. ಜನರ ಖಾತೆಗಳಿಗೆ ನಾವು ಯೋಜನೆಗಳ ಹಣ ಹಾಕಿದ್ದೇವೆ. ಕಾಂಗ್ರೆಸ್ ಆರೋಪಕ್ಕೆ ನಾವು ವಿಚಲಿತರಾಗಿಲ್ಲ. ಪೇಜ್ ಕಮಿಟಿವರೆಗೂ ನಾವು ಹೋಗಿದ್ದೇವೆ. ಕಾಂಗ್ರೆಸ್ ಗ್ರಾಮಗಳಿಗೆ ಹೋಗಲಿ ನೋಡೋಣ. ಅವರಿಗೆ ಅಂತಹ ಕೇಡರ್ ಇಲ್ಲ. ನಾಯಕರ ಹಿಂದೆ ಸುತ್ತುವ ಕೆಲ ನಾಯಕರಿದ್ದಾರೆ. ಕೆಲ ದಿನದಲ್ಲಿ ಅವರೂ ಹೋಗಲಿದ್ದಾರೆ ಎಂದು ಹೇಳಿದರು.
ಓದಿ: ಭಾರತ್ ಜೋಡೋ ಬಗ್ಗೆ ಕಾಂಗ್ರೆಸ್ ಪಶ್ಚಾತ್ತಾಪ ಪಡೆಬೇಕಿತ್ತು: ಸಚಿವ ಸುನಿಲ್ ಕುಮಾರ್