ಬೆಂಗಳೂರು: ರಾಜ್ಯ ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ಇದೇ ಏಪ್ರಿಲ್ 25ರಿಂದ ಮೇ21ರವರೆಗೆ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಹೈಕೋರ್ಟ್ನ ರಿಜಿಸ್ಟ್ರಾರ್ (ನ್ಯಾಯಾಂಗ) ಕೆ.ಎಸ್.ಭರತ್ ಕುಮಾರ್ ನೋಟಿಫಿಕೇಷನ್ ಹೊರಡಿಸಿದ್ದಾರೆ.
ಈ ಅವಧಿಯ ನಡುವೆ 7 ದಿನಗಳು ರಜಾ ಕಾಲದ ನ್ಯಾಯಪೀಠಗಳು ಬೆಂಗಳೂರು ಪ್ರಧಾನ ಪೀಠದಲ್ಲಿ ಕಾರ್ಯ ನಿರ್ವಹಿಸಲಿವೆ. ಧಾರವಾಡ ಹಾಗೂ ಕಲಬುರಗಿ ಪೀಠಗಳಲ್ಲಿ ಭೌತಿಕ ವಿಚಾರಣೆ ಇರುವುದಿಲ್ಲ. ಬದಲಿಗೆ ಈ ಪೀಠಗಳಲ್ಲಿ ದಾಖಲಾಗುವ ತುರ್ತು ಪ್ರಕರಣಗಳು ಬೆಂಗಳೂರಿನ ಪ್ರಧಾನ ಪೀಠದಲ್ಲಿ ಆನ್ಲೈನ್ ಮೂಲಕ ವಿಚಾರಣೆ ನಡೆಯಲಿವೆ. ಹಾಗಿದ್ದೂ, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಪ್ರಕರಣ ದಾಖಲಿಸಲು ವಾರಪೂರ್ತಿ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10 ರಿಂದ 12ರ ನಡುವೆ ನೇರವಾಗಿ ಅಥವಾ ಇ-ಫೈಲಿಂಗ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ, ಸರಳವಾಗಿರಲಿದೆ ಈ ವರ್ಷದ ಪರೀಕ್ಷೆ
ವಕೀಲರಿಗೆ ಸೂಚನೆ: ರಜಾ ಕಾಲದ ಪೀಠಗಳಲ್ಲಿ ಪ್ರಕರಣದ ವಿಚಾರಣೆ ಕೋರಿ ಮನವಿ ಸಲ್ಲಿಸುವ ವಕೀಲರು ಅರ್ಜಿಯ ಆರಂಭದ ಮೊದಲ ಪ್ಯಾರಾಗ್ರಾಫ್‌ನಲ್ಲೇ ತುರ್ತು ವಿಚಾರಣೆಯ ಕುರಿತು ಉಲ್ಲೇಖಿಸಬೇಕು. ಇಲ್ಲದಿದ್ದಲ್ಲಿ ಅಂತಹ ಅರ್ಜಿಗಳನ್ನು ರಜಾ ಕಾಲದ ಪೀಠಗಳ ಎದುರು ನಿಗದಿ ಮಾಡಲಾಗದು ಎಂದು ಸ್ಪಷ್ಟಪಡಿಸಲಾಗಿದೆ. ಇನ್ನು ರಜಾ ಕಾಲದ ಪೀಠಗಳಲ್ಲಿ ತುರ್ತು ಅಗತ್ಯವಿರುವ ತಡೆಯಾಜ್ಞೆ ಕೋರಿಕೆ, ಮಧ್ಯಂತರ ನಿರ್ದೇಶನ, ತಾತ್ಕಾಲಿಕ ತಡೆಯಾಜ್ಞೆ ಮನವಿಗಳ ಹೊರತಾಗಿ ಸಿವಿಲ್ ಸ್ವರೂಪದ ಪ್ರಕರಣಗಳ ವಿಚಾರಣೆ ಪರಿಗಣಿಸುವುದಿಲ್ಲ. ಅದೇ ರೀತಿ ಕ್ರಿಮಿನಲ್ ಪ್ರಕರಣಗಳಲ್ಲಿಯೂ ತುರ್ತು ಆದೇಶಗಳ, ತಡೆಯಾಜ್ಞೆಗಳ ಕೋರಿಕೆಯನ್ನಷ್ಟೇ ಪರಿಗಣಿಸಲಾಗುತ್ತದೆ.
ರಜಾ ಕಾಲದ ಪೀಠಗಳು ಕಾರ್ಯನಿರ್ವಹಿಸುವ ದಿನಾಂಕ:
26-04-2022
28-04-2022
05-05-2022
10-05-2022
12-05-2022
17-05-2022
19-05-2022