ಬೆಂಗಳೂರು: ರಾಜ್ಯದಲ್ಲಿ ಒಣ ಹವೆ ಮುಂದುವರೆದಿದ್ದು, ಕೆಲವೆಡೆ ಚದುರಿದಂತೆ ಬೇಸಿಗೆ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಇನ್ನೆರಡು ದಿನ ಮುಂಗಾರು ಪೂರ್ವ ಮಳೆ ಮುಂದುವರೆಯಲಿದೆ. ಆದರೆ, ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಮಳೆಯಾಗುವುದಿಲ್ಲ. ಉಷ್ಣಾಂಶದ ಪ್ರಮಾಣದಲ್ಲಿ ನಿರಂತರ ಏರಿಕೆಯಾಗಿದ್ದು, ಕೆಲವೆಡೆ ಸಂಜೆ ಹಾಗೂ ರಾತ್ರಿ ವೇಳೆ ಮಿಂಚು, ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನವೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಗಾಗ್ಗೆ ಮುಂಗಾರು ಪೂರ್ವ ಮಳೆ ಚದುರಿದಂತೆ ಬೀಳಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಸಂಜೆಯಾಗುತ್ತಿದ್ದಂತೆ ಹಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ರಾಜ್ಯದ ಕರಾವಳಿ, ಮಲೆನಾಡು ಭಾಗದ ಒಂದೆರಡು ಕಡೆ ಮಳೆಯಾಗಬಹುದು. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಾತ್ರ ಮಳೆ ನಿರೀಕ್ಷಿಸಬಹುದು ಎಂದು ತಿಳಿಸಿದ್ದಾರೆ.
ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾದ ವರದಿಯಾಗಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಬೆಳಗಾವಿ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಕಲಬುರಗಿ, ಬೀದರ್, ಕೊಪ್ಪಳ ಮತ್ತಿತರ ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಸಂಭವವಿದೆ ಎಂದು ಮಾಹಿತಿ ನೀಡಿದ್ದಾರೆ.
ತಾಪಮಾನ ಏರಿಕೆ: ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಬಿಸಿಲಿನ ಬೇಗೆ ಹಾಗೂ ಸೆಖೆಯೂ ಹೆಚ್ಚಾಗಿದೆ. ಸಂಜೆಯ ವೇಳೆ ಮೋಡ ಕವಿದ ವಾತಾವಾರಣ ಉಂಟಾಗುವ ಸಾಧ್ಯತೆಗಳಿವೆ. ಅದೇ ರೀತಿ ಧಾರವಾಡ, ಕಲಬುರಗಿ, ಬಳ್ಳಾರಿ, ಕರಾವಳಿ ಭಾಗದ ಜಿಲ್ಲೆಗಳಲ್ಲೂ ಗರಿಷ್ಠ ತಾಪಮಾನದಲ್ಲಿ ಏರಿಕೆ ಉಂಟಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಉಷ್ಣ ಮಾರುತದ ಆತಂಕ : ಹವಾಮಾನ ಇಲಾಖೆಯಿಂದ ಮಾಹಿತಿ