ಬೆಂಗಳೂರು: ನಕಲಿ ಫೇಸ್ಬುಕ್ ಅಕೌಂಟ್ನಲ್ಲಿ ಕೆಲವು ಕಿಡಿಗೇಡಿಗಳು ಅವಹೇಳನಕಾರಿ ಪೋಸ್ಟ್ ಮಾಡುತ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ನಗರ ಪೊಲೀಸ್ ಆಯುಕ್ತರನ್ನ ಭೇಟಿ ಮಾಡಿ ದೂರು ದಾಖಲಿಸಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ನಟ ಚಿರಂಜೀವಿ ಜೊತೆ ಹುಟ್ಟುಹಬ್ಬದ ಸಂದರ್ಭದಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋವನ್ನು ಫೇಸ್ಬುಕ್ನಲ್ಲಿ ಸುಮಲತಾ ಅವರ ಹೆಸರಲ್ಲಿ ನಕಲಿ ಆಕೌಂಟ್ ತೆರೆದು ವಿಡಿಯೋ ಹರಿ ಬಿಡಲಾಗಿತ್ತು. ಈ ವಿಡಿಯೋದ ವಿರುದ್ಧ ಕೆಲವರು ಟಾಂಗ್ ಕೂಡ ನೀಡಿದ್ದರು. ಇದರಿಂದ ನೊಂದ ಸುಮಲತಾ ಸೈಬರ್ ಠಾಣೆಗೆ ದೂರು ನೀಡಿದ್ದು, ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನ ಭೇಟಿ ಮಾಡಿ ತನಿಖೆ ಕುರಿತು ಮಾಹಿತಿ ಪಡೆದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಚುನಾವಣಾ ಸಮಯದಿಂದ ಇಂತ ಪೊಸ್ಟ್ಗಳು ಹಾಕ್ತಾ ಇದ್ದಾರೆ. ಇದು ಇಂದು ಕೂಡ ಮುಂದುವರೆದಿದೆ. ಈ ಮೊದಲು ಏನೋ ಹುಡುಗರು ಹಾಕ್ತಾರೆ ಅಂತ ಸುಮ್ಮನಾಗಿದ್ದೆ. ಅದೇ ನಾನು ಮಾಡಿದ ತಪ್ಪು. ಇವಾಗ ಸುಮ್ಮನೆ ಬಿಡೊ ಮಾತೇ ಇಲ್ಲ. ಈ ಸಂಬಂಧ ದೂರು ನೀಡಿದ್ದೇನೆ. ಅಂತವರ ವಿರುದ್ಧ ಕ್ರಮ ಜರುಗಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ ಎಂದರು.
ಇನ್ನೂ ಡಿಕೆಶಿ ಅವರ ಬಂಧನದ ಬಗ್ಗೆ ನಾನು ಕಮೆಂಟ್ ಮಾಡಲ್ಲ. ನನಗೆ ಸಂಬಂಧ ಇಲ್ಲದ ವಿಚಾರದ ಬಗ್ಗೆ ನಾನು ಮಾತಾಡಲ್ಲ ಎಂದು ಮುನ್ನೆಡೆದರು.