ಬೆಂಗಳೂರು: ಉದಯೋನ್ಮುಖ ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಪ್ರೋತಾಹ ನೀಡುವ ನಿಟ್ಟಿನಲ್ಲಿ ಅವರಿಗೆ ಸುಸಜ್ಜಿತವಾದ ತರಬೇತಿ ನೀಡುವ ಸಂಬಂಧ ಇನ್‌ಫೋಸಿಸ್ ಪ್ರತಿಷ್ಠಾನ, ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಯೋಜನೆ ಐದು ವರ್ಷಗಳದ್ದಾಗಿದ್ದು, ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡಿ ಅವರನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಅಣಿಗೊಳಿಸಲು ಫೌಂಡೇಶನ್, ಅಕಾಡೆಮಿಗೆ ಒಟ್ಟು 16 ಕೋಟಿ ರೂಪಾಯಿಗಳ ನೆರವು ನೀಡಿದೆ.
ಏಷ್ಯನ್ ಗೇಮ್, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಒಲಿಂಪಿಕ್ಸ್ ಸೇರಿದಂತೆ ಇನ್ನೂ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಮ್ಮ ಭಾರತೀಯ ಬ್ಯಾಡ್ಮಿಂಟನ್ ಪಟುಗಳು ಸ್ಪರ್ಧಿಸುವಂತೆ ಮಾಡುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ಈ ತರಬೇತಿ ಕಾರ್ಯಕ್ರಮ 2019ರ ಅಕ್ಟೋಬರ್‌ನಿಂದ ಆರಂಭವಾಗಲಿದ್ದು, ಮುಂದಿನ 5 ವರ್ಷಗಳಲ್ಲಿ ಪ್ರತಿ ವರ್ಷ 65 ಕಿರಿಯ ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತದೆ.
ಈ ಸಂಬಂಧ ಮಾತನಾಡಿದ ಇನ್ಫೋಸಿಸ್ ಫೌಂಡೇಶನ್ನ ಅಧ್ಯಕ್ಷೆ ಸುಧಾ ಮೂರ್ತಿ, ನಮ್ಮ ದೇಶ ಕ್ರೀಡೆಗಳನ್ನು ಪ್ರೀತಿಸುತ್ತದೆ. ಆದರೆ, ಕ್ರೀಡೆಗಳನ್ನು ವೃತ್ತಿಯನ್ನಾಗಿ ಮಾಡುವ ವಿಚಾರಕ್ಕೆ ಬಂದಾಗಅತ್ಯುತ್ತಮ ಕ್ರೀಡಾಪಟುಗಳಿಗೆ ಸಾಂಸ್ಥಿಕವಾದ ಬೆಂಬಲ ಕೊರತೆ ಕಾಡುತ್ತದೆ. ನಮ್ಮ ಭಾರತೀಯ ಕ್ರೀಡಾ ಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಸಾಧನೆ ತೋರಬೇಕಾದರೆ ಅವರಿಗೆ ವಿಶ್ವದ ಅತ್ಯುತ್ತಮವಾದ ಮೂಲಸೌಕರ್ಯಗಳು ಮತ್ತು ತರಬೇತಿ ಅಗತ್ಯವಿದೆ. ಈ ಹಿನ್ನೆಲೆ ನಾವು ಇದಕ್ಕೆ ನೆರವಾಗುತ್ತಿದ್ದೇವೆ ಎಂದರು.