ಬೆಂಗಳೂರು: "ನಟ ಸುದೀಪ್ ನಮ್ಮ ಸ್ಟಾರ್ ಪ್ರಚಾರಕರಲ್ಲಿ ಒಬ್ಬರು. ಸದ್ಯದಲ್ಲೇ ಅವರ ಪ್ರವಾಸ ಮತ್ತು ಪ್ರಚಾರದ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಇನ್ನೂ ಕೆಲವು ತಾರೆಯರು ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ. ಅವರು ಯಾರು ಎನ್ನುವುದನ್ನು ಕಾದು ನೋಡಿ" ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸುದೀಪ್ ಎಲ್ಲೆಲ್ಲಿ ಪ್ರವಾಸ ಮಾಡಬೇಕು, ಯಾವ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಬೇಕು ಎಂದು ಇನ್ನೂ ನಿರ್ಧಾರವಾಗಿಲ್ಲ. ಪಕ್ಷದಲ್ಲಿ ಚರ್ಚಿಸಿ ವೇಳಾಪಟ್ಟಿ ಸಿದ್ಧಪಡಿಸಲಿದ್ದೇವೆ" ಎಂದರು.
"ಸುದೀಪ್ ಅವರನ್ನು ಪ್ರಚಾರಕ್ಕೆ ಕರೆ ತರುತ್ತಿರುವುದನ್ನು ಕಾಂಗ್ರೆಸ್ ಟೀಕಿಸಿದೆ. ಆದರೆ ಇದೇ ಕಾಂಗ್ರೆಸ್ ಹಿಂದೆ ಅಧಿಕಾರದಲ್ಲಿದ್ದಾಗ ಇಬ್ಬರು ಚಲನಚಿತ್ರ ನಟಿಯರನ್ನು ಸಚಿವರನ್ನಾಗಿ ಮಾಡಿರಲಿಲ್ಲವೇ?. ಆಗ ಅವರನ್ನು ಮುಂದಿರಿಸಿಕೊಂಡು ಗೆದ್ದರು ಎನ್ನಬಹುದೇ? ನಟರು, ಸಾಹಿತಿಗಳು ದೇಶದ ಪ್ರಜೆಗಳು, ಅವರಿಗೆ ಸ್ವಾತಂತ್ರ್ಯವಿದೆ. ಅವರು ಯಾವುದೇ ವ್ಯಕ್ತಿ ಅಥವಾ ಪಕ್ಷದ ಪರ ಪ್ರಚಾರ ಮಾಡಬಹುದು. ಪಕ್ಷ ಸೇರಲೂಬಹುದು, ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ" ಎಂದು ಹೇಳಿದರು.
"ಇತ್ತೀಚೆಗೆ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಲ್ಲರೂ ಕೂಡ ತುರ್ತು ಸುದ್ದಿಗೋಷ್ಠಿ ನಡೆಸಿದ್ರು. ಎರಡನೇ ಪಟ್ಟಿ ಬಿಡುಗಡೆ ಮಾಡ್ತಾರೆ ಎಂದುಕೊಂಡಿದ್ದೆ. ಆದರೆ ಆ ಸುದ್ದಿಗೋಷ್ಠಿಯಲ್ಲಿ ಸಾವಿರಾರು ಜನ ರಾಜ್ಯಕ್ಕೆ ಐಟಿ, ಇಡಿ, ಸಿಬಿಐ ಅಧಿಕಾರಿಗಳು ಬಂದಿದ್ದಾರೆ, ಕಾಂಗ್ರೆಸ್ ಮುಖಂಡರು, ಅಭ್ಯರ್ಥಿಗಳು ಅವರ ಸ್ನೇಹಿತರ ನಿವಾಸಗಳ ಮೇಲೆ ಸಂಚು ಮಾಡಿ ದಾಳಿ ಮಾಡುತ್ತಾರೆ ಎಂದು ಹೇಳಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಭ್ರಷ್ಟಾಚಾರದ ವಿರುದ್ಧವಾಗಿ ಸುಳ್ಳಿನ ಕಂತೆಯನ್ನೇ ಸೆಟ್ ಮಾಡಿದ್ದಾರೆ" ಎಂದು ಟೀಕಿಸಿದರು.
"ಇದರರ್ಥ ಇವರೆಲ್ಲಾ ಸತ್ಯ ಹರಿಶ್ಚಂದ್ರರಲ್ಲವೇ? ಯಾವುದೇ ತನಿಖಾ ಸಂಸ್ಥೆ ಬಂದರೂ ಇವರಿಗೆ ಹೆದರಿಕೆ ಯಾಕೆ? ಕಾಂಗ್ರೆಸ್ಗೆ ಸ್ವಾಯತ್ತ ಸಂಸ್ಥೆಗಳ ಬಗ್ಗೆ ಗೌರವ ಇದೆಯೇ? ಚುನಾವಣೆ ಸೋತರೆ ಇವಿಎಂ ಸರಿ ಇರಲಿಲ್ಲ ಎನ್ನುತ್ತಾರೆ. ಚುನಾವಣಾ ಆಯುಕ್ತರ ಬಗ್ಗೆ ನಂಬಿಕೆ ಇಲ್ಲ, ಇಡೀ ಚುನಾವಣಾ ಆಯೋಗದ ಮೇಲೆ ವಿಶ್ವಾಸವಿಲ್ಲ. ನ್ಯಾಯಾಲಯ ಅವರ ವಿರುದ್ಧ ತೀರ್ಪು ಕೊಟ್ಟರೆ ತೀರ್ಪಿಗೆ ದಿಕ್ಕಾರ ಹಾಕುವ ಪಕ್ಷ ಕಾಂಗ್ರೆಸ್. ಇವರಿಗೆ ಯಾವುದೇ ಸ್ವಾಯತ್ತತೆ ಇರುವ ಸಂಸ್ಥೆಗಳ ಮೇಲೆ ಭರವಸೆ ವಿಶ್ವಾಸ ಇಲ್ಲ."
"ಸಿಬಿಐ ಯಾರ ಕಾಲದಲ್ಲಿ ಚೋರ್ ಬಚಾವ್ ಸಂಸ್ಥೆಯಾಗಿತ್ತು. ಮಾಧ್ಯಮ ಸ್ನೇಹಿತರು ಅವರ ವಿರುದ್ಧ ತೋರಿಸಿದರೆ ಅವರ ವಿರುದ್ಧವೂ ಸಿಬಿಐ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ನೀವು ಯಾವ ಸಂಸ್ಥೆಯ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೀರಿ, ನಿಮ್ಮ ಯುಪಿಎ ಸರ್ಕಾರ ಇದ್ದಾಗ ಎಲ್ಲ ಬ್ಯಾಂಕ್ಗಳಲ್ಲಿ ನಿಮಗೆ ಬೇಕಾದವರಿಗೆ ಲಕ್ಷಾಂತರ ಕೋಟಿ ಸಾಲ ಕೊಟ್ಟು ಎನ್ಪಿಎ ಮಾಡಿದ್ದೀರಿ, ಕಲ್ಲಿದ್ದಲು ಗಣಿಯನ್ನು ದೂರವಾಣಿ ಮಾಡಿದವರಿಗೆ ಮಂಜೂರು ಮಾಡುತ್ತಿದ್ದಿರಿ, 2ಜಿ ಸ್ಪೆಕ್ಟ್ರಂ ಹಗರಣ ನಡೆಯಿತು. ಇಷ್ಟೆಲ್ಲಾ ಇದ್ದರೂ ಇಂದು ನೀವು ನಮ್ಮ ಬಗ್ಗೆ ಮಾತನಾಡುತ್ತಿದ್ದೀರಿ."
"ನೀವೆಲ್ಲಾ ಸತ್ಯಹರಿಶ್ಚಂದ್ರರು ಎಂದು ಒಪ್ಪಿಕೊಳ್ಳೋಣ. ಅದು ನಿಜವೇ ಆಗಿದ್ದಲ್ಲಿ ಎಷ್ಟು ಸಾವಿರ ಐಟಿ ಅಧಿಕಾರಿಗಳು, ಇಡಿ, ಸಿಬಿಐ ಅಧಿಕಾರಿಗಳು ಬಂದರೂ ನೀವೇಕೆ ಭಯ ಪಡಬೇಕು, ಯಾಕೆ ಹೆದರುತ್ತೀರಿ? ದೀಪ ಆರುವ ಮೊದಲು ಪ್ರಕಾಶವಾಗಿ ಉರಿಯುವ ರೀತಿ ಕಾಂಗ್ರೆಸ್ ಕೂಡ ಸೋಲುವ ಮೊದಲು ಇಲ್ಲಸಲ್ಲದ ಆರೋಪದ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ಮಾಡಿದರೆ ಗೆಲುವು ಸಿಗಲಿದೆ ಎಂದುಕೊಂಡಿದೆ. ಆದರೆ ಅದು ಸಾಧ್ಯವಿಲ್ಲ."
"ಮೋದಿ ಸರ್ಕಾರ ಬಂದ ನಂತರ ಎಲ್ಲ ಸ್ವಾಯತ್ತತೆ ಸಂಸ್ಥೆಗಳನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಕರೆ ಮಾಡಿ ದಾಳಿಗೆ ಸೂಚಿಸಲಾಗುತ್ತಿತ್ತು. ವಿಚಾರಣೆ ವಿಳಂಬ ಮಾಡಲಾಗುತ್ತಿತ್ತು. ಆದರೆ ನಮ್ಮ ಸರ್ಕಾರದಲ್ಲಿ ಅಂತಹ ಕೆಲಸ ಮಾಡುತ್ತಿಲ್ಲ, ಸ್ವಾಯತ್ತತೆ ಸಂಸ್ಥೆಗಳಿಗೆ ಪೂರ್ಣ ಸ್ವತಂತ್ರ ಅಧಿಕಾರ ಕೊಡಲಾಗಿದೆ" ಎಂದು ಸಚಿವ ಸುಧಾಕರ್ ಹೇಳಿದರು.
ಸಮ್ಮಿಶ್ರ ಸರ್ಕಾರ ಬರಲ್ಲ: "ರಾಜ್ಯದ ಜನ ಬಹಳ ಸ್ಪಷ್ಟವಾಗಿದ್ದಾರೆ. ಮೋದಿ ನಾಯಕತ್ವದಲ್ಲಿ ರಾಜ್ಯದಲ್ಲಿಯೂ ಬಿಜೆಪಿ ಬರಬೇಕು ಎಂದುಕೊಂಡಿದ್ದಾರೆ. ಅಲ್ಲದೆ ರಾಜ್ಯದ ಜನತೆ ಪ್ರಜ್ಞಾವಂತರಿದ್ದಾರೆ. ಎರಡು ಮೂರು ಬಾರಿ ಸಮ್ಮಿಶ್ರ ಸರ್ಕಾರ ಬಂದಾಗ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದ್ದು ಗೊತ್ತಿದೆ. ಹಾಗಾಗಿ ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಕೊಡಲಿದ್ದಾರೆ" ಎಂದರು.
"ಇಂದು ನಮ್ಮ ಜಿಲ್ಲೆಯ ಅನ್ಯ ಪಕ್ಷದ ಕೆಲ ಮುಖಂಡರು ಬಿಜೆಪಿ ಸೇರಿದ್ದಾರೆ. ನಮ್ಮ ಪಕ್ಷ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಬಲಿಷ್ಟವಾಗುತ್ತಿದೆ. ಬಲಿಷ್ಟವಾಗಬೇಕು ಎಂದರೆ ನಾವು ಅನಿವಾರ್ಯವಾಗಿ ಕೆಲವು ನಾಯಕರನ್ನು ಅನ್ಯಪಕ್ಷದಿಂದ ಕರೆದು ತರಬೇಕಿದೆ. ಇದರ ಅವಶ್ಯಕತೆ ಇದೆ. ಈ ಭಾಗದಲ್ಲಿ ನಮಗೆ ಬಲಬೇಕಾಗಿದೆ. ಇಲ್ಲಿ ಸ್ವಂತ ಶಕ್ತಿ ಕಡಿಮೆ ಇತ್ತು, ಹಾಗಾಗಿ ನಾವು ಇದನ್ನು ಮಾಡಬೇಕಿದೆ. ಬೇರೆ ಪಕ್ಷ ತೊರೆದು ನಮ್ಮ ಪಕ್ಷಕ್ಕೆ ಬಂದವರೆಲ್ಲಾ ಬಿಜೆಪಿ ಬಗ್ಗೆ ವಿಶ್ವಾಸ ಇರಿಸಿದ್ದಾರೆ. ಮೋದಿ ನಾಯಕತ್ವ ಮನಸಾರೆ ಒಪ್ಪಿ ನಮ್ಮ ಪಕ್ಷಕ್ಕೆ ಬೇಷರತ್ ಆಗಿ ಬರುತ್ತಿದ್ದಾರೆ" ಎಂದು ಸಚಿವರು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಬಿಜೆಪಿಗೆ ನಟ ಸುದೀಪ್ ಬೆಂಬಲ: ಕೇಸರಿ ಪಕ್ಷದ ಲೆಕ್ಕಾಚಾರವೇನು?