ಬೆಂಗಳೂರು : ದವಡೆಯಲ್ಲಿ ಬೆಳೆಯುವ ಅಪರೂಪದ ಗಡ್ಡೆ (ಅಮೆಲೋಬ್ಲಾಸ್ಟೋಮಾ) ಯಿಂದ ಬಳಲುತ್ತಿದ್ದ 55 ವರ್ಷದ ನೈಜೀರಿಯಾ ಮೂಲದ ಕ್ರೈಸ್ತ ಪಾದ್ರಿಗೆ ಫೊರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದಿದ್ದಾರೆ. ಫೋರ್ಟಿಸ್ ಆಸ್ಪತ್ರೆಯ ಆಂಕೊಲಾಜಿಯ ಹಿರಿಯ ನಿರ್ದೇಶಕ ಡಾ. ಸಂದೀಪ್ ನಾಯಕ್, ಇಎನ್‌ಟಿ ಸಮಾಲೋಚಕಿ ಡಾ. ಆಥಿರಾ ರಾಮಕೃಷ್ಣನ್ ಮತ್ತು ಸಲಹೆಗಾರ್ತಿ ಡಾ ಸುಷ್ಮಾ ಮೆಹ್ತಾ ಅವರ ತಂಡ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ.
ಫೋರ್ಟಿಸ್ ಆಸ್ಪತ್ರೆಯ ಆಂಕೊಲಾಜಿಯ ಹಿರಿಯ ನಿರ್ದೇಶಕ ಡಾ. ಸಂದೀಪ್ ನಾಯಕ್ ಮಾತನಾಡಿ, ನೈಜೀರಿಯಾ ಮೂಲಕ ಪಾದ್ರಿಯ ಬಾಯಲ್ಲಿ ಸಣ್ಣದಾದ ಗಡ್ಡೆಯೊಂದು ಕಾಣಿಸಿಕೊಂಡಿದೆ. ಅಲ್ಲಿಯ ಆಸ್ಪತ್ರೆಗಳಿಗೆ ತೋರಿಸಿದರೂ ಗಡ್ಡೆ ಬೆಳೆಯುವುದು ನಿಂತಿಲ್ಲ. ಮೂರು ಶಸ್ತ್ರಚಿಕಿತ್ಸೆ ನಡೆಸಿದರೂ ಸಹ ಗಡ್ಡೆ ಬೆಳೆಯುತ್ತಲೇ ಸಾಗಿದೆ. ಇದರಿಂದ ಭಯಭೀತಗೊಂಡು ನಮ್ಮ ಆಸ್ಪತ್ರೆಗೆ ದಾಖಲಾದರು. ಇದನ್ನು ಪರಿಶೀಲಿಸಿದಾಗ ಇದು ಅಮೆಲೋಬ್ಲಾಸ್ಟೋಮಾ ಎಂದು ತಿಳಿಯಿತು. ಅಂದರೆ, ದವಡೆಯಲ್ಲಿ ಬೆಳೆಯುವ ಅಪರೂಪದ ಗಡ್ಡೆ. ಈ ಗಡ್ಡೆಯು ಸುಮಾರು 15x20 ಸೆ.ಮೀ. ಬೆಳೆದು ಸಂಪೂರ್ಣ ಮುಖವನ್ನೇ ಆವರಿಸಿಕೊಳ್ಳುವಷ್ಟು ದೊಡ್ಡದಾಗಿತ್ತು. ಇದರಿಂದ ರೋಗಿಗೆ ಆಹಾರ ಸೇವನೆ ಮಾಡುವುದೇ ಕಷ್ಟವಾಗಿತ್ತು ಎಂದು ಹೇಳಿದರು.
ಅಪರೂಪದ ಗಡ್ಡೆ ಶಸ್ತ್ರಚಿಕಿತ್ಸೆ ನಡೆಸುವುದು ನಮಗೆ ಸವಾಲಿನ ಕೆಲಸವಾಗಿತ್ತು. ಆದರೆ, ನಮ್ಮ ತಂಡ ಇದನ್ನು ಸವಾಲಾಗಿ ಸ್ವೀಕರಿಸಿತು. ಫ್ರೀ ಫೈಬುಲಾ ಫ್ಲಾಪ್ ತಂತ್ರವನ್ನು ಬಳಸಿಕೊಂಡು ದವಡೆಯಲ್ಲಿನ ಗಡ್ಡೆ ತೆಗೆದು ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಗಡ್ಡೆ ತೆಗೆದ ಜಾಗದಲ್ಲಿ ದವಡೆಯ ಮೂಳೆಯನ್ನು ಮರುನಿರ್ಮಾಣ ಮಾಡಲು, ರೋಗಿಯ ಕಾಲಿನ ಮೂಳೆಯ ಸ್ವಲ್ಪ ಭಾಗವನ್ನು ಕತ್ತರಿಸಿ, 3ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ದವಡೆಯಲ್ಲಿ ಅಳವಡಿಸುವ ಕೆಲಸ ಮಾಡಲಾಯಿತು. ಕಾಲಿನ ಮೂಳೆಯ ಸಹಾಯದಿಂದ ದವಡೆ ಮೂಳೆಗೆ ಸಪೋರ್ಟ್ ನೀಡದಿದ್ದರೆ, ರೋಗಿಯು ಬಾಯಿ ತೆರೆದು ತಿನ್ನಲು, ಆಹಾರ ಜಗಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಸವಾಲನ್ನು ತೆಗೆದುಕೊಳ್ಳಲಾಯಿತು ಎಂದು ವಿವರಿಸಿದರು.
ಸದ್ಯ, ರೋಗಿಯೂ ಸಂಪೂರ್ಣ ಗುಣಮುಖವಾಗಿದ್ದು, ತನ್ನ ತಾಯ್ನಾಡಿಗೆ ಹಿಂತಿರುಗಿದ್ದಾರೆ. ದವಡೆ ನೋವು ಕಡಿಮೆಯಾದ ಬಳಿಕ ಮತ್ತೆ ರೋಗಿಯು ಹಲ್ಲುಗಳ ಜೋಡಣೆಗೆ ಆಸ್ಪತ್ರೆಗೆ ಬರಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಮಹಿಳೆಯ ಹೊಟ್ಟೆಯಲ್ಲಿನ 4 ಕೆಜಿ ಗಡ್ಡೆ ಹೊರತೆಗೆದು ಜೀವ ಉಳಿಸಿದ ವೈದ್ಯರು...!