ಬೆಂಗಳೂರು: ಕೋವಿಡ್ ವಿರುದ್ಧ ಹೋರಾಡಲು ಲಸಿಕೆ ಪ್ರಮುಖ ಅಸ್ತ್ರವಾಗಿರುವುದರಿಂದ 45 ವರ್ಷ ಮೇಲ್ಪಟ್ಟವರು ಮತ್ತು 18ರಿಂದ 44 ವರ್ಷದೊಳಗಿನ ಜನರಿಗೆ ಮೊದಲ ಡೋಸ್ ಲಸಿಕೆ ನೀಡುವ ಸಂಬಂಧ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್ಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ಈ ನಿರ್ದೇಶನ ನೀಡಿದೆ. ಕೋವಿಡ್ ತಡೆಗೆ ವ್ಯಾಕ್ಸಿನೇಷನ್ ಪ್ರಬಲ ಮಾರ್ಗವಾಗಿದೆ. ಆದರೆ, 45 ವರ್ಷ ದಾಟಿದವರಿಗೂ ಲಸಿಕೆ ಕೊರತೆಯಿದೆ. ಜೊತೆಗೆ ಸರ್ಕಾರ 18-44 ವಯೋಮಿತಿಯವರಿಗೆ, ಅದು ಕೇವಲ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡುತ್ತಿದೆ. ಅದೇ ವರ್ಗದ ಉಳಿದ ಜನರಿಗೆ ಹೇಗೆ ಒಂದನೇ ಡೋಸ್ ಲಸಿಕೆ ಒದಗಿಸುತ್ತೀರಿ ಎಂದು ಪ್ರಶ್ನಿಸಿತು.
ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ 18-44 ವರ್ಷದೊಳಗಿನವರಿಗೂ 1ನೇ ಡೋಸ್ ಕೋವ್ಯಾಕ್ಸಿನ್ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲನೇ ಡೋಸ್ ಕೋವ್ಯಾಕ್ಸಿನ್ ನೀಡುತ್ತಿಲ್ಲ, 2 ನೇ ಡೋಸ್ಗೂ ಕಾಯುವ ಸ್ಥಿತಿ ಇದೆ. ಇದನ್ನು ಸಮಾನತೆಯ ಹಕ್ಕಿನ ವ್ಯಾಪ್ತಿಯೊಳಗೆ ಪರಿಶೀಲಿಸಬೇಕಾಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿತು.
ಸರ್ಕಾರದ ಪರ ಹಾಜರಿದ್ದ ಎಜಿ ಪ್ರಭುಲಿಂಗ್ ನಾವದಗಿ ಮಾಹಿತಿ ನೀಡಿ, ರಾಜ್ಯದಲ್ಲಿ ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಕೊರತೆಯಾಗದಂತೆ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ವಿಶೇಷ ಚೇತನರ ಜೊತೆಗೆ ಇತರೆ ಆದ್ಯತಾ ಗುಂಪಿಗೂ ಲಸಿಕೆಗೆ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಪರ ಹಾಜರಿದ್ದ ಎಎಸ್ ಜಿ ಐಶ್ವರ್ಯ ಭಾಟಿ ಮಾಹಿತಿ ನೀಡಿ, ಒಟ್ಟು ಉತ್ಪಾದನೆಯಲ್ಲಿ ಕೇಂದ್ರ ಸರ್ಕಾರ ಶೇ.50ರಷ್ಟು ಖರೀದಿಸಿ ಅದನ್ನು ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ. ಇನ್ನುಳಿದ ಶೇ.50ರಲ್ಲಿ ರಾಜ್ಯ ಸರ್ಕಾರಗಳು ಶೇ.25 ಮತ್ತು ಖಾಸಗಿ ಆಸ್ಪತ್ರೆಗಳಿಗೆ ಶೇ.25 ರಷ್ಟು ಲಸಿಕೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಯಾವುದಾದರೂ ರಾಜ್ಯದಲ್ಲಿ ಖಾಸಗಿಯವರು ತಮ್ಮ ಕೋಟಾದ ಹಂಚಿಕೆ ಪಡೆದುಕೊಳ್ಳದಿದ್ದರೆ, ಅದನ್ನು ಇತರ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಹಾಗಾಗಿ ಕರ್ನಾಟಕದಲ್ಲಿ ಖಾಸಗಿಯವರಿಗೆ ಶೇ.25ಕ್ಕಿಂತ ಸ್ವಲ್ಪ ಜಾಸ್ತಿ ಲಸಿಕೆ ದೊರಕಿದೆ ಎಂದು ವಿವರಿಸಿದರು.
ಓದಿ:ಬೆಂಗಳೂರಲ್ಲಿ ಯುವತಿಗೆ ಸ್ನೇಹಿತರಿಂದಲೇ ಲೈಂಗಿಕ ಕಿರುಕುಳ.. ವಿಡಿಯೋ ಮಾಡಿ ವಿಕೃತಿ ಮೆರೆದವರು ಅರೆಸ್ಟ್