ಬೆಂಗಳೂರು : ಹಲಾಲ್ ಕಟ್ ವಿವಾದದ ನಡುವೆ ಪಶುಪಾಲನೆ ಇಲಾಖೆ ವಧಾಗಾರಗಳಲ್ಲಿ ಕಡ್ಡಾಯವಾಗಿ ಸ್ಟನ್ನಿಂಗ್ ಮಾಡಿ ಪ್ರಾಣಿ ವಧಿಸುವಂತೆ ಆದೇಶ ಹೊರಡಿಸಿದೆ. ಅದಕ್ಕಾಗಿ ಪಶುಪಾಲನೆ ಇಲಾಖೆ ಪ್ರಾಣಿ ಹಿಂಸೆ ಪ್ರತಿಬಂಧಕ (ಪ್ರಾಣಿಗಳ ವಧಾಗಾರ) ನಿಯಮ 2001 ಅನ್ನು ಉಲ್ಲೇಖಿಸಿ ಆದೇಶ ಹೊರಡಿಸಿದೆ. ಅಷ್ಟಕ್ಕೂ ಈ ಕಾನೂನು ಏನು ಹೇಳುತ್ತೆ ಎಂಬ ವರದಿ ಇಲ್ಲಿದೆ.
ಬೆಂಗಳೂರು ನಗರ ಜಿಲ್ಲೆಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಏ.1ರಂದು ಹೊರಡಿಸಿದ ಆದೇಶದಲ್ಲಿ ಬೆಂಗಳೂರಿನ ಎಲ್ಲಾ ವಧಾಗಾರಗಳಲ್ಲಿ ಪ್ರಾಣಿಗಳನ್ನು ಕಡ್ಡಾಯವಾಗಿ STUNNING ಮಾಡಿ ಪ್ರಜ್ಞೆ ತಪ್ಪಿಸಿ, ವಧಿಸುವಂತೆ ಸೂಚನೆ ನೀಡಿದ್ದಾರೆ. ಹಲಾಲ್-ಜಟ್ಕಾ ಕಟ್ ವಿವಾದದ ಮಧ್ಯೆ ಈ ಆದೇಶ ಹೊರ ಬಿದ್ದಿರುವುದು ಭಾರಿ ಸುದ್ದಿಗೆ ಗ್ರಾಸವಾಗಿದೆ.
ಈ ಆದೇಶದ ತಾತ್ಪರ್ಯ ಪ್ರಾಣಿಯನ್ನು ಹಿಂಸೆ ಮಾಡದೇ ಅದರ ಪ್ರಜ್ಞೆ ತಪ್ಪಿಸಿ ಬಳಿಕ ವಧಿಸುವುದಾಗಿದೆ. ಈ ಬೆಂಗಳೂರು ಜಿಲ್ಲೆಯ ಪಶುಪಾಲನೆ ಇಲಾಖೆ ಹೊರಡಿಸಿದ ಈ ಸುತ್ತೋಲೆ ಈಗ ಮಾಂಸದ ವ್ಯಾಪಾರಿಗಳಿಗೆ ಅದರಲ್ಲೂ ಮುಸ್ಲಿಂ ವ್ಯಾಪಾರಿಗಳ ಕಣ್ಣು ಕೆಂಪಾಗಿಸಿದೆ.
ಸ್ಟನ್ನಿಂಗ್ ಕಡ್ಡಾಯ : ಪಶು ಪಾಲನೆ ಇಲಾಖೆ ಹೊರಡಿಸಿದ ಕಡ್ಡಾಯ Stunning ಕೈಗೊಳ್ಳುವಂತೆ ಆದೇಶಿಸಿದ ಪ್ರತಿಯಲ್ಲಿ PCA (Slaughter House) Rules 2001 ನಿಯಮಗಳನ್ನು ಉಲ್ಲೇಖಿಸಲಾಗಿದೆ. ಬೆಂಗಳೂರು ನಗರದ ಎಲ್ಲಾ ಅಧಿಕೃತ ಪ್ರಾಣಿ ವಧಾಗಾರಗಳಲ್ಲಿ/ಕೋಳಿ ಅಂಗಡಿಗಳಲ್ಲಿ PCA (Slaughter House) Rules 2001 ಸೆಕ್ಷನ್ 6ರ ಸಬ್ ಸೆಕ್ಷನ್ 4ರ ನಿಯಮಗಳನ್ನು ಪಾಲಿಸುತ್ತಿಲ್ಲವೆಂದು ಸಾರ್ವಜನಿಕರಿಂದ ದೂರು ಕೇಳಿ ಬಂದಿವೆ. ಹೀಗಾಗಿ, ಪ್ರಾಣಿಗಳನ್ನು ವಧೆ ಮಾಡುವ ಮುನ್ನ ಕಡ್ಡಾಯವಾಗಿ STUNNING ಮಾಡಿ ಪ್ರಜ್ಞೆ ತಪ್ಪಿಸಿ, ವಧೆ ಮಾಡಲು ಕ್ರಮವಹಿಸಬೇಕು ಎಂದು ಆದೇಶಿಸಿದ್ದಾರೆ.
ಏನಿದು ಪ್ರಾಣಿ ಹಿಂಸೆ ಪ್ರತಿಬಂಧಕ ನಿಯಮ 2001? : PCA (Slaughter House) Rules 2001 ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಮಾರ್ಚ್ 26, 2001ರಂದು ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ಈ ನಿಯಮವನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಪ್ರಾಣಿಗಳನ್ನು ವಧಾಗಾರಗಳಲ್ಲಿ ವಧಿಸುವಾಗ ಅನುಸರಿಸಬೇಕಾದ ನಿಯಮಗಳನ್ನು ರೂಪಿಸಲಾಗಿದೆ.
ಯಾವ ರೀತಿ ವಧಿಸಬೇಕು, ವಧಿಸುವ ಸಂದರ್ಭ ಪಾಲಿಸಬೇಕಾದ ಕ್ರಮಗಳು, ವಧಾಗಾರಗಳಲ್ಲಿರಬೇಕಾದ ವ್ಯವಸ್ಥೆ ಸೇರಿದಂತೆ ಕೆಲ ನಿರ್ದಿಷ್ಟ ನಿಯಮಗಳನ್ನು ರೂಪಿಸಲಾಗಿದೆ. ಈ ನಿಯಮದ ಪ್ರಮುಖ ಅಂಶವೇನೆಂದರೆ ಪ್ರಾಣಿಯನ್ನು ಹಿಂಸೆ ಮಾಡದೇ ವಧಿಸಬೇಕು ಎಂಬುದಾಗಿದೆ. ಪ್ರಾಣಿ ವಧಿಸುವ ಮುನ್ನ, ವಧಿಸುವಾಗ ಹಾಗೂ ವಧಿಸಿದ ನಂತರ ಅನುಸರಿಸಬೇಕಾದ ನಿಯಮಗಳನ್ನು ಉಲ್ಲೇಖಿಸಲಾಗಿದೆ.
ನಿಯಮದಲ್ಲಿನ 'ಸ್ಟನ್ನಿಂಗ್' ಅಂಶ ಏನು?: ಈ ನಿಯಮದಲ್ಲಿ ಸೆಕ್ಷನ್ 6ರ ಸಬ್ ಸೆಕ್ಷನ್ 4ರಲ್ಲಿ ಪ್ರಾಣಿಗಳನ್ನು ಸ್ಟನ್ನಿಂಗ್ ಮಾಡಿ ಪ್ರಜ್ಞೆ ತಪ್ಪಿಸಿ ವಧಿಸಬೇಕು ಎಂದು ಹೇಳಲಾಗಿದೆ. ಅದರಂತೆ ಅಧಿಕೃತ ವಧಾಗಾರ (slaughter house)ಗಳಲ್ಲಿ ಪ್ರಾಣಿಗಳನ್ನು ಮೊದಲು ಸ್ಟನ್ನಿಂಗ್ ಮಾಡಬೇಕು. ಸ್ಟನ್ನಿಂಗ್ ಎಂದರೆ ಪ್ರಜ್ಞೆ ತಪ್ಪಿಸುವುದಾಗಿದೆ. ಅವುಗಳ ಪ್ರಜ್ಞೆ ತಪ್ಪಿಸಿ ಬಳಿಕ ವಧಿಸಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಎಲ್ಲಾ ವಧಾಗಾರಗಳು ಈ ಸ್ಟನ್ನಿಂಗ್ ನಿಯಮವನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಹೇಳಲಾಗಿದೆ. ಪ್ರತ್ಯೇಕ ಸ್ಥಳದಲ್ಲಿ ವಧಿಸುವ ಮುನ್ನ ಸ್ಟನ್ನಿಂಗ್ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ವಧಿಸುವ ನಿಯಮದಲ್ಲಿನ ಇತರ ಅಂಶಗಳೇನು?:
- ವಧಿಸುವ ಪ್ರಾಣಿ ಗಬ್ಬ(ಪ್ರೆಗ್ನೆನ್ಸಿ)ಆಗಿರಬಾರದು
- ಮೂರು ತಿಂಗಳ ಮರಿಯಾಗಿರಬಾರದು
- ಇನ್ನೊಂದು ಪ್ರಾಣಿಯ ಕಣ್ಣಮುಂದೆ ವಧಿಸಬಾರದು
- ವಧೆಗೂ ಮುನ್ನ ಯಾವುದೇ ರಾಸಾಯನಿಕ, ಡ್ರಗ್ ಕೊಡಬಾರದು
- ವಧಿಸಿದ ಪ್ರಾಣಿಯ ರಕ್ತ ಇತರೆ ಪ್ರಾಣಿಯ ಮೇಲೆ ಸಿಡಿಯಬಾರದು
ಹಲಾಲ್, ಜಟ್ಕಾ ಕಟ್‌ನಲ್ಲಿ ಸ್ಟನ್ನಿಂಗ್ ನಿಯಮ ಉಲ್ಲಂಘನೆ : ಬಹುತೇಕ ಎಲ್ಲಾ ವಧಾಗಾರಗಳಲ್ಲಿ ನಿಯಮದಂತೆ ಸ್ಟನ್ನಿಂಗ್ ನಿಯಮ ಪಾಲಿಸಲಾಗುತ್ತಿಲ್ಲ ಎಂದು ಪಶುಪಾಲನೆ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗ ಮುನ್ನಲೆಗೆ ಬಂದಿರುವಂಥ ಹಲಾಲ್ ಕಟ್ ವೇಳೆಯಲ್ಲಾಗಲಿ, ಜಟ್ಕಾ ಕಟ್ ವೇಳೆಯಲ್ಲಾಗಲಿ ಸ್ಟನ್ನಿಂಗ್ ನಿಯಮವನ್ನು ಯಾರೂ ಅನುಸರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇಂತದ್ದೊಂದು ನಿಯಮ ಇದೆ ಎಂಬುದೇ ಮಾಂಸದ ಅಂಗಡಿಯವರಿಗೆ ಗೊತ್ತಿಲ್ಲ. ಹಲಾಲ್ ಕಟ್ ನಲ್ಲಿ ಪ್ರಾಣಿಯ ರಕ್ತ ತೆಗೆದು ನಿಧಾನವಾಗಿ ವಧಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅದೇ ಜಟ್ಕಾ ಕಟ್ ನಲ್ಲೂ ಕ್ಷಿಪ್ರವಾಗಿ ಪ್ರಾಣಿಯನ್ನು ವಧಿಸಲಾಗುತ್ತದೆ ಎನ್ನಲಾಗಿದೆ. ಈ ಎರಡೂ ಮಾದರಿಯ ಕಟ್‌ಗಳಲ್ಲಿ ನಿಯಮದಂತೆ ಸ್ಟನ್ನಿಂಗ್ ಮಾಡಿ ಪ್ರಾಣಿಯ ಪ್ರಜ್ಞೆ ತಪ್ಪಿಸಿ ವಧಿಸುತ್ತಿಲ್ಲ ಎಂದು ನಿವೃತ್ತ ಅಧಿಕಾರಿ ತಿಳಿಸಿದ್ದಾರೆ. ಹಾಗಾಗಿ, ಹಲಾಲ್ ಇಲ್ಲಾ ಜಟ್ಕಾ ಕಟ್‌ನಲ್ಲಾಗಲಿ 'ಸ್ಟನ್ನಿಂಗ್' ನಿಯಮವನ್ನು ಗಾಳಿಗೆ ತೂರಲಾಗಿದೆ.