ಬೆಂಗಳೂರು: ಹೊಸದಾಗಿ ಮೀಸಲಾತಿ ಪಟ್ಟಿಗೆ ಜಾತಿಗಳನ್ನು ಸೇರಿಸಲು ನಮ್ಮ ವಿರೋಧವಿಲ್ಲ. ಆದರೆ, ಅದಕ್ಕೂ ಮೊದಲು ಈಗಾಗಲೇ ಮೀಸಲಾತಿ ಪಟ್ಟಿಯಲ್ಲಿರುವ ಸಮುದಾಯಗಳ ಸ್ಥಿತಿಗತಿಗಳ ಅಧ್ಯಯನ ನಡೆಸಬೇಕು, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಬಹಿರಂಗಪಡಿಸಿ ಅದರಂತೆ ಮೀಸಲಾತಿ ಕಲ್ಪಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್, ಅನಾದಿ ಕಾಲದಿಂದಲೂ ಭಾರತ ದೇಶದಲ್ಲಿ ಸಾವಿರಾರು ಜಾತಿ/ಜನಾಂಗಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇವರ ಸರ್ವತೋಮುಖ ಬೆಳವಣಿಗೆಗೆ ಭಾರತದ ಸಂವಿಧಾನದಲ್ಲಿ ಕ್ರಮಗಳನ್ನು ರೂಪಸಿಲು ಅವಕಾಶ ನೀಡಿರುವುದು ಸರಿಯಷ್ಟೆ.
ಇದರರ್ಥ ಸ್ವಾತಂತ್ರ್ಯ ಬಂದ ನಂತರ ಅಂದರೆ ಸುಮಾರು 70 ವರ್ಷಗಳು ಕಳೆದ ಮೇಲೂ ಕೇಂದ್ರ ಹಿಂದುಳಿದ ಪಟ್ಟಿ ಅಧಾರಿತವಾಗಿವೆ. ರಾಜ್ಯ ಹಿಂದುಳಿದ ಪಟ್ಟಿಯ ಆದೇಶದ ದಿನಾಂಕ 30 ಮಾರ್ಚ್ 2002 ಅಧಿಸೂಚನೆಯ ಪ್ರಕಾರ ಇರುವ ಪ್ರವರ್ಗ 1 ಹಾಗೂ ಅದರಲ್ಲಿ ಇರುವ 95 ಜಾತಿಗಳು ಹಾಗೂ ಪ್ರವರ್ಗ 2ಎ ರಲ್ಲಿ ಇರುವ 102 ಜಾತಿಗಳು ಬರುತ್ತವೆ. ಇನ್ನು ಪ್ರವರ್ಗ 2ಬಿ ಯಲ್ಲಿ ಇರುವ ಒಂದು ಜಾತಿ ಮತ್ತು 3ಎ ದಲ್ಲಿ 3 ಜಾತಿಗಳು ಹಾಗೂ ಪ್ರವರ್ಗ 3ಬಿ ರಲ್ಲಿ ಇರುವ 6 ಜಾತಿಗಳ ನೈಜ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಬೇಕು. ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಈಗಾಗಲೇ ಸಂವಿಧಾನದ ಅನುಚ್ಛೇದ 340 ರ ಪ್ರಕಾರ ಅನ್ವೇಷಣೆ /ವಿಚಾರಣೆ ನಡೆಸಬೇಕು. ಅಷ್ಟೇ ಅಲ್ಲ ಅವರ ಸ್ಥಿತಿಗತಿಗಳನ್ನು ಅರಿತು ರಾಜ್ಯ ಸರ್ಕಾರ ಅವರು ಎದುರುಸುತ್ತಿರುವ ಸಮಸ್ಯೆಗಳ ಸುಧಾರಣೆಯ ಆದ್ಯತೆ ಮೇರೆಗೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಅದನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ವಾರ್ಷಿಕ ಸುಮಾರು 400 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಿ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಾತಿ ಸಮೀಕ್ಷೆ ವರದಿ ಬಿಡುಗಡೆ ಮಾಡಿ:
ಈ ಸಮೀಕ್ಷೆಯ ವರದಿಯು ರಾಜ್ಯ ಸರ್ಕಾರದ ವತಿಯಿಂದ ಬಿಡುಗಡೆಗೊಂಡಲ್ಲಿ ರಾಜ್ಯದ ಉದ್ದಗಲಕ್ಕೂ ನೆಲೆಸಿರುವ ಜಾತಿ / ಜನಾಂಗಗಳ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಹಾಗೂ ಮುಂದುವರೆದ ಜಾತಿಗಳ ಸೇರಿದಂತೆ) ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತಾದ ನೈಜ ಚಿತ್ರಣ ಲಭ್ಯತೆಯ ಅವಕಾಶವಿರುತ್ತದೆ. ರಾಜ್ಯ ಸರ್ಕಾರವೂ ತಮ್ಮ ಹಂತದಲ್ಲಿ ಈ ವರದಿಯನ್ನು ಪರಾಮರ್ಶಿಸಿ ದತ್ತಾಂಶಗಳನ್ನು ಉಲ್ಲೇಖಿಸಿ ಅಗತ್ಯ ಮಾನದಂಡಗಳನ್ನು ರೂಪಿಸಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜಾತಿ/ಜನಾಂಗಗಳ ಸ್ಥಿತಿಗತಿಗಳ ಸುಧಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ ಅದನ್ನು ಮಾಡಿ ಎಂದು ಒತ್ತಾಯಿಸಿದರು.
ಈಗಾಗಲೇ ಸಂವಿಧಾನದ ಅನುಚ್ಛೇದ 15(6) ಮತ್ತು 16(6) ರ ಪ್ರಕಾರ ದೇಶದ ಎಲ್ಲ ಜನಾಂಗದಲ್ಲಿರುವ ಅರ್ಥಿಕ ದುರ್ಬಲ ವರ್ಗದವರಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಶೇ 10 ರ ಮೀಸಲಾತಿ ಕಲ್ಪಿಸಿರುವುದು ಸ್ವಾಗತಾರ್ಹ. 2018ರಲ್ಲಿ ಕೇಂದ್ರ ಸರ್ಕಾರವು ನ್ಯಾಯಾಲಯದ ಆದೇಶದ ಮೇರೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲಾಯಿತು (ಅನುಚ್ಛೇದ 338ಬಿ), ಈ ಆಯೋಗವೂ ಹಿಂದುಳಿದ ಸಾಮಾಜಿಕ/ಶೈಕ್ಷಣಿಕ ಸುಧಾರಣೆಗೆ ಮತ್ತು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಅಥವಾ ತೆಗೆಯುವ ಶಿಪಾರಸು ಮಾಡಲು ರಚಿಸಲಾಗಿದೆ ಎಂದರು.
ಸರ್ವತೋಮುಖ ಅಭಿವೃದ್ಧಿಗೆ ಕಾರ್ಯಕ್ರಮ ಮಾಡಿ
ರಾಜ್ಯ ಸರ್ಕಾರದ ಅಧಿಸೂಚನೆ ದಿ.30 ಮಾರ್ಚ್ 2002 ರಂತೆ ಇರುವ ಪ್ರವರ್ಗ 1 ಮತ್ತು ಪ್ರವರ್ಗ 2ಎ ರಲ್ಲಿ ಬರುವ ಎಲ್ಲ ಜಾತಿಗಳನ್ನು ಸಂವಿಧಾನ ಅನುಚ್ಛೇಧ 340 ರ ಪ್ರಕಾರ ಕೂಲಂಕಷವಾಗಿ ಅನ್ವೇಷಿಸಿ ಅವರ ಸ್ಥಿತಿಗತಿಗಳನ್ನು ಕಂಡುಕೊಳ್ಳಲು ಹಾಗೂ ಅವರ ಸರ್ವತೋಮುಖ ಏಳಿಗೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಸಿಬೇಕಾಗಿದೆ. 2017 ರಲ್ಲಿ ಶ್ವಾಶತ ಹಿಂದುಳಿದ ಅಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರ ಹಣ ಸುಮಾರು 162 ಕೋಟಿ ರೂಪಾಯಿಗಳ ವೆಚ್ಚ ಮಾಡಿ ಬಂದಂತಹ ವರದಿಯನ್ನು ಕೂಡಲೇ ರಾಜ್ಯ ಸರ್ಕಾರ ಪರಾಮರ್ಶಿಸಬೇಕು. ಅದರಲ್ಲಿ ಇರುವಂತಹ ಅಂಕಿ ಅಂಶಗಳ ಪ್ರಕಾರ ಸಾಮಾಜಿಕ ನ್ಯಾಯಾ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕೂಡಲೇ ಮುಂದಾಗಬೇಕು. ಸಂವಿಧಾನ ಅನುಚ್ಛೇದ 15(6) ಮತ್ತು 16(6) ರ ಪ್ರಕಾರ ಎಲ್ಲ ಜನಾಂಗದಲ್ಲಿ ಅರ್ಥಿಕ ದುರ್ಬಲ ವರ್ಗದವರಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಶೇ 10 ರ ಮೀಸಲಾತಿ ಕಲ್ಪಿಸಿ ಅದರಂತೆ ಕಾರ್ಯಕ್ರಮಗಳನ್ನು ರಾಜ್ಯ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿದರು.
ಸಣ್ಣ ಸಮುದಾಯಗಳಿಗೆ ಅನ್ಯಾಯ: ಲಕ್ಷ್ಮೀನಾರಾಯಣ
ನಂತರ ಮಾತನಾಡಿದ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ ಲಕ್ಷ್ಮೀ ನಾರಾಯಣ್, 2ಎ , ಪ್ರವರ್ಗದಲ್ಲಿ ಬರುವ ಬಹುತೇಕರು ಹಿಂದುಳಿದ್ದೇವೆ, ಸರ್ಕಾರದಿಂದ ಸವಲತ್ತುಗಳ ಸರಿಯಾಗಿ ಸಿಗುತ್ತಿಲ್ಲ, ಮೀಸಲಾತಿ ವಿಚಾರದಲ್ಲಿ ವಿಚಿತ್ರವಾದ ಘಟನೆಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಜಾತಿ ಜಾತಿಗಳ ನಡುವೆ ವ್ಯತ್ಯಾಸಗಳು ಹೆಚ್ಚಾಗುತ್ತಿದೆ. ಜಾತಿಗಳನ್ನು ಹೊಡೆಯುವ ಕೆಲಸ ಮಾಡುತ್ತಿದೆ ಎಂದರು. ಚುನಾವಣೆ ದೃಷ್ಟಿಯಿಂದ ಜಾತಿಗೆ ನಿಗಮಗಳನ್ನು ಮಾಡಲಾಗುತ್ತಿದೆ, ಇದರಿಂದ ಸಣ್ಣ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ, ಇದು ದುರದೃಷ್ಟಕರ ಹೀಗೆ ಆಗಬಾರದಿತ್ತು ಎಂದರು.
ಸಿದ್ದರಾಮಯ್ಯ 4 ಸಾವಿರ ಕೋಟಿ ಮೀಸಲಿಟ್ಟಿದ್ದರು:
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ನಾಲ್ಕು ಸಾವಿರ ಕೋಟಿ ಹಣ ಇಟ್ಟಿದ್ದರು ಆದರೆ ಯಡಿಯೂರಪ್ಪ ಸರ್ಕಾರ 1200 ಕೋಟಿ ಮಾತ್ರ ಮೀಸಲಿರಿಸಿದೆ. ಕನ್ನಡ ನಾಡಿನಲ್ಲಿ, ಕನ್ನಡ ಮಾತಾಡುವವರು ಹೆಚ್ಚು ಇದ್ದಾರೆ ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಬರಿ 2 ಕೋಟಿ ಇರಿಸಿದ್ದಾರೆ, ಬೇರೆ ಸಮುದಾಯಗಳಿಗೆ ನೂರಾರು ಕೋಟಿ ಇಡುತ್ತಿದ್ದಾರೆ. ವೀರಶೈವ ನಿಗಮ ಮಂಡಳಿಗೆ ರಾತ್ರೋರಾತ್ರಿ 500 ಕೋಟಿ ಇಡ್ತಾರೆ ಆದರೆ ನಮ್ಮ ಸಮುದಾಯಗಳಿಗೆ ಹಿಂದೆ ಇದ್ದ ಅನುದಾನ ಕಟ್ ಮಾಡುತ್ತಾರೆ. ಇದು ಸಮಂಜಸವಲ್ಲ, ಇದರ ವಿರುದ್ಧ ಧ್ವನಿ ಎತ್ತಬೇಕಿದೆ, ಹಾಗಾಗಿ ಮುಂದೆ ಒಂದು ದುಂಡು ಮೇಜಿನ ಸಭೆ ಮಾಡಿ ಇದರ ಬಗ್ಗೆ ಚರ್ಚೆ ಮಾಡಿ ವರದಿಯನ್ನು ನೀಡುತ್ತೇವೆ ಎಂದರು.