ಬೆಂಗಳೂರು: ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡದ ಉಡುಪಿಯ ಸರ್ಕಾರಿ ಮಹಿಳಾ ಕಾಲೇಜಿನ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವಿದ್ಯಾರ್ಥಿನಿ ಈ ರಿಟ್ ಅರ್ಜಿ ಸಲ್ಲಿಸಿದ್ದು, ಹಿಜಾಬ್ ಧರಿಸುವುದು ಸಂವಿಧಾನದ ವಿಧಿ 14 ಮತ್ತು 25ರ ಅಡಿ ಮೂಲಭೂತ ಹಕ್ಕೆಂದು ಘೋಷಿಸುವಂತೆ ಮನವಿ ಮಾಡಿದ್ದಾರೆ. ಅರ್ಜಿಯಲ್ಲಿ, 2021ರ ಡಿಸೆಂಬರ್ 28ರಂದು ತನ್ನೊಂದಿಗೆ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹೋಗಿದ್ದೆವು.
ಈ ವೇಳೆ ಕಾಲೇಜಿಗೆ ಬರದಂತೆ ಮತ್ತು ತರಗತಿಗೆ ಹಾಜರಾಗದಂತೆ ನಿರ್ಬಂಧಿಸಿದರು. ಕಾರಣ ಕೇಳಿದ್ದಕ್ಕೆ ಹಿಜಾಬ್ ಧರಿಸಿ ಕಾಲೇಜಿಗೆ ಬರುವಂತಿಲ್ಲ. ಹಿಜಾಬ್ ಧರಿಸುವುದು ಡ್ರೆಸ್ ಕೋಡ್ ಉಲ್ಲಂಘಿಸಿದಂತೆ ಎಂದರು. ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗುವುದನ್ನು ನಿರ್ಬಂಧಿಸಿರುವ ಕಾಲೇಜಿನ ಕ್ರಮ ಅಕ್ರಮ ಹಾಗೂ ತಾರತಮ್ಯದಿಂದ ಕೂಡಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.
ಹಿಜಾಬ್ ಧರಿಸುವುದು ಧಾರ್ಮಿಕ ಸ್ವಾತಂತ್ರ್ಯದ ಭಾಗ. ಧಾರ್ಮಿಕ ಹಕ್ಕಿನ ಆಚರಣೆ ವೇಳೆ ಅದು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದಲ್ಲಿ ಮಾತ್ರ ರಾಜ್ಯ ಹಸ್ತಕ್ಷೇಪ ಮಾಡಬಹುದು ಅಷ್ಟೇ. ಇಂತಹ ಯಾವ ಸಮಸ್ಯೆಯೂ ಹಿಜಾಬ್ ಧರಿಸುವ ವಿಷಯದಲ್ಲಿ ಇಲ್ಲ. ಹಾಗಿದ್ದೂ, ಕಾಲೇಜು ಆಡಳಿತ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಗಿಡುವ ಮೂಲಕ ಪ್ರತ್ಯೇಕಿಸಿದೆ. ಇದು ವಿದ್ಯಾರ್ಥಿನಿಯರ ಮಾನಸಿಕ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ.
ರಾಜಕೀಯ ಕಾರಣಗಳಿಗಾಗಿ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡಲಾಗಿದೆ. ಅಷ್ಟೇ ಅಲ್ಲ, ಧರ್ಮದ ಕಾರಣಕ್ಕಾಗಿ ಅರ್ಜಿದಾರ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳನ್ನು ಕಾಲೇಜು ಮೊಕಟುಗೊಳಿಸಿದೆ. ಸಂವಿಧಾನದ ವಿಧಿ 25 ಹಾಗೂ 26 ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯವನ್ನು ಕಾಯ್ದಿರಿಸಿದೆ. ಹಿಜಾಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಆಚರಣೆ. ಕುರಾನ್ನಲ್ಲಿಯೂ ಕೂಡ ಮುಸ್ಲಿಂ ನಂಬಿಕೆಯನ್ನು ಪ್ರತಿಪಾದಿಸುವ ಮಹಿಳೆಯರಿಂದ ಹಿಜಾಬ್ ಧರಿಸುವ ಅಭ್ಯಾಸವನ್ನು ತೆಗೆದುಹಾಕಿದರೆ ಧರ್ಮದ ಮೂಲ ಸ್ವರೂಪದಲ್ಲಿಯೂ ಬದಲಾವಣೆಯಾಗುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ, ಹಿಜಾಬ್ ಧರಿಸುವ ವಿಚಾರದಲ್ಲಿ ಕಾಲೇಜು ಆಡಳಿತ ಮಧ್ಯಪ್ರವೇಶಿಸದಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರ ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ.
ಓದಿ: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ