ಬೆಂಗಳೂರು: ನಗರದ ಮುನ್ನೇಕೊಳಲು ಸರ್ಕಾರಿ ಶಾಲೆಯ ವಿದ್ಯಾರ್ಥಿಗೆ ಖಾಸಗಿ ಶಾಲಾ ವಾಹನ ಡಿಕ್ಕಿ ಹೊಡೆದಿದ್ದು, ಇದರ ಗಾಯಗೊಂಡ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ನಿತೀಶ್ ಕುಮಾರ್ (7) ಮೃತ ವಿದ್ಯಾರ್ಥಿಯಾಗಿದ್ದು, ರಾಜೇಶ್ ಮತ್ತು ಪ್ರಿಯಾ ಎಂಬ ದಂಪತಿಯ ಒಬ್ಬನೇ ಮಗನಾಗಿದ್ದ. ಇಲ್ಲಿನ ಸರ್ಕಾರಿ ಶಾಲೆಯ ಆಂಗ್ಲ ಮಾಧ್ಯಮದಲ್ಲಿ 1ನೇ ತರಗತಿಯಲ್ಲಿ ಓದುತ್ತಿದ್ದ. ತಾಯಿ ಖಾಸಗಿ ಕಂಪನಿಯಲ್ಲಿ ಹೌಸ್‌ಕೀಪಿಂಗ್ ಆಗಿದ್ದರೆ, ತಂದೆ ದಿನಗೂಲಿ ನೌಕರಿ ಮಾಡುತ್ತಿದ್ದಾನೆ.
ಬುಧವಾರ ಬೆಳಗ್ಗೆ 9 ಗಂಟೆ ವೇಳೆ ಶಾಲೆಯ ಸಮೀಪ ನಡೆದುಕೊಂಡು ಬರುವಾಗ ರಸ್ತೆ ಬದಿ ಬಾಲಕ ನಿಂತಿದ್ದ. ಅದೇ ವೇಳೆ ಖಾಸಗಿ ಶಾಲಾ ವಾಹನ ವೇಗವಾಗಿ ಬಂದು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಬಸ್ ತಾಗಿದ ಪರಿಣಾಮ ಬಾಲಕ ಕೆಳಗೆ ಬಿದ್ದು ತಲೆಗೆ ಗಾಯವಾಗಿದೆ. ಆದರೆ, ಅದೇ ನೋವಿನಲ್ಲಿಯೇ ಬಾಲಕ ಶಾಲೆಗೆ ಹೋಗಿ ತರಗತಿಯಲ್ಲಿ ಕುಳಿತುಕೊಂಡಿದ್ದ ಎಂದು ತಿಳಿದು ಬಂದಿದೆ.
ನಂತರ ವಿಷಯ ತಿಳಿದ ಶಿಕ್ಷಕರು ಬಾಲಕನ್ನು ಆರೈಕೆ ಮಾಡುತ್ತಿದ್ದಾಗ ಪ್ರಜ್ಞೆ ತಪ್ಪಿದ್ದಾನೆ. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆದರೂ ಬಾಲಕನ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾನೆ.
ಸಂಚಾರ ಪೊಲೀಸರು ಆಸ್ಪತ್ರೆಗೆ ದೌಡಾಯಿಸಿ ಪರಿಶೀಲನೆ ನಡೆಸಿ ಅನಾಹುತ ನಡೆದ ಸ್ಥಳಕ್ಕೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಎಚ್‌ಎಎಲ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕ ವಿಠ್ಠಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ವಿಚಿತ್ರ ಕೊಲೆ.. ಶೌಚಾಲಯದ ಗುಂಡಿ ಮೇಲೆ ಶವ ಹೂತು ಆರೋಪಿಗಳು ಎಸ್ಕೇಪ್