ಬೆಂಗಳೂರು: ದೇಶ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಎಚ್ಚರಿಕೆ ನೀಡಿದರು.
ನಗರದ ಮಲ್ಲೇಶ್ವರಂ ಕಚೇರಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಸಂಬಂಧ ಪ್ರತಿಕ್ರಿಯಿಸುತ್ತಾ, ದೇಶದ ಪ್ರಜೆಗಳು ಈ ನೆಲದ ಅನ್ನ ತಿಂದು, ಭಾರತ ಮಾತೆಯ ಮಡಿಲಲ್ಲಿ ಮಲಗಿ ಈ ರೀತಿ ಮಾಡಿದ್ರೆ ಅವರು ದೇಶ ದ್ರೋಹಿಗಳೇ. ಇಂತವರನ್ನು ಕ್ಷಮಿಸುವ ಪ್ರಮೇಯವೇ ಇಲ್ಲ. ಇಂತವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಪರಿಷತ್ತು ಚುನಾವಣೆಯಿಂದ ಪಕ್ಷೇತರ ಅಭ್ಯರ್ಥಿ ಹಿಂದೆ ಸರಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅನಿಲ್ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನನಗೂ ಕೂಡ ದೂರವಾಣಿ ಕರೆ ಮಾಡಿ, ನಾನು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ನಿಮಗೆ ಒಳ್ಳೆಯದಾಗಲಿ ಅಂತ ಹಾರೈಸಿದ್ದಾರೆ. ಆದರೆ, ಈಗಾಗಲೆ ಚುನಾವಣೆ ಘೊಷಣೆಯಾಗಿದ್ದು, ಎಲ್ಲಾ ತಯಾರಿ ನಡೆದಿದೆ ಎಂದರು.
ಉಪಚುನಾವಣೆಯಲ್ಲಿ ನಮ್ಮ 117 ಮಂದಿ ಹಾಗೂ ಪಕ್ಷೇತರರು ಭಾಗವಹಿಸಲಿದ್ದಾರೆ. ಆದರೆ, ಕಾಂಗ್ರೆಸ್ ನವರು ಚುನಾವಣೆಯಲ್ಲಿ ಭಾಗವಹಿಸುತ್ತಾರೋ ಇಲ್ಲವೋ ತೀರ್ಮಾನ ಆಗಿಲ್ಲ. ನಾಳೆಯ ಅವರ ಶಾಸಕಾಂಗ ಸಭೆಯಲ್ಲಿ ತೀರ್ಮಾನವಾಗಲಿದೆ. ಅದೇ ರೀತಿ ಜೆಡಿಎಸ್ ನವರದ್ದು ಇನ್ನೂ ತೀರ್ಮಾನವಾಗಿಲ್ಲ. ಆದರೆ, ಅಭ್ಯರ್ಥಿ ಮಾತ್ರ ನನಗೆ ಫೋನ್ ಮಾಡಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ನಿಮಗೆ ಶುಭವಾಗಲಿ ಅಂತ ಶುಭಕೋರಿದ್ದಾರೆ ಎಂದು ತಿಳಿಸಿದರು.