ಬೆಂಗಳೂರು: ಅನ್ಲಾಕ್ ಬಳಿಕ ಬೀದಿಬದಿಯ ವ್ಯಾಪಾರ ಸುಧಾರಿಸುತ್ತಿದೆ. ಕೊರೊನಾ ಪರಿಸ್ಥಿತಿಗೂ ಹಿಂದೆ ಇದ್ದಷ್ಟು ಪ್ರಮಾಣದ ವಹಿವಾಟು ಆಗದಿದ್ದರೂ ಜೀವನೋಪಾಯಕ್ಕೆ ಬೇಕಾದಷ್ಟು ಆದಾಯ ಬರುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಕೊರೊನಾ ಬರುವ ಮುಂಚೆಯಿಂದಲೂ ಕಾಲರಾ ಭೀತಿಯಿಂದ ಬೀದಿ ಬದಿಯ ತಿಂಡಿ ವ್ಯಾಪಾರಕ್ಕೆ ಪಾಲಿಕೆ ನಿಷೇಧ ಹೇರಿತ್ತು. ಆದರೆ ಈಗ ಸುಮಾರು 6 ತಿಂಗಳ ಬಳಿಕ ಬೀದಿ ಬದಿಯ ವ್ಯಾಪಾರಿಗಳು ಒಲೆ ಹಚ್ಚಿದ್ದು, ನಗರದ ಹಲವು ಕಡೆಗಳಲ್ಲಿ ತಕ್ಕ ಮಟ್ಟಿಗೆ ವ್ಯಾಪಾರ ನಡೆಯುತ್ತಿದೆ.
ಈ ಕುರಿತು ಬೀದಿ ಬದಿ ವ್ಯಾಪಾರಿ ವಿಜೇಂದ್ರ ಮಾತನಾಡಿ, ಕೊರೊನಾ ಮಹಾಮಾರಿ ಬರುವ ಮುನ್ನ ಪ್ರತಿನಿತ್ಯ ಸರಾಸರಿ 4 ಸಾವಿರ ರೂ. ವಹಿವಾಟು ಆಗುತ್ತಿತ್ತು. ಆದರೆ ಈಗ ನಿತ್ಯ ಕೇವಲ 2500 ರೂ. ಮಾತ್ರ ಆಗುತ್ತಿದೆ. ಇದರ ಜೊತೆಗೆ ಬೀದಿ ಬದಿ ವ್ಯಾಪಾರಿಗಳು ಸ್ಟೀಲ್ ಅಥವಾ ಪ್ಲಾಸ್ಟಿಕ್ ತಟ್ಟೆ ಬದಲಿಗೆ ಅಡಿಕೆ ತಟ್ಟೆ ನೀಡುತ್ತಿದ್ದಾರೆ. ಇದರಿಂದ ವ್ಯಾಪಾರಿಗಳಿಗೆ 2.5 ರೂ. ಹೆಚ್ಚಾಗುತ್ತಿದ್ದರೂ ಊಟದ ದರವನ್ನು ಹೆಚ್ಚಿಸಿಲ್ಲ. ಒಂದು ವೇಳೆ ಫಾಯಿಲ್ ಪ್ಲೇಟ್ ನೀಡಿದರೆ ಬಿಸಿ ಖಾದ್ಯಗಳನ್ನು ಹಿಡಿದು ತಿನ್ನಲು ಸಾಧ್ಯವಿಲ್ಲ ಎಂದರು.
ಕೇಂದ್ರದ ಸಹಾಯ ಇದೆ, ರಾಜ್ಯ ಕೈ ಚೆಲ್ಲಿ ಕೂತಿದೆ
ಪ್ರಧಾನ ಮಂತ್ರಿ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲ ನೀಡುತ್ತಿದ್ದಾರೆ. ಇದಲ್ಲದೆ ಸರಿಯಾದ ಸಮಯಕ್ಕೆ ಹಣ ಹಿಂತಿರುಗಿಸಿದರೆ ಒಂದು ಲಕ್ಷದ ವರೆಗೂ ಸಾಲವನ್ನು ನೀಡುವ ಅವಕಾಶವಿದೆ. ಇದರ ಜೊತೆಗೆ ಯುಪಿಐ ಆಧಾರದ ವಹಿವಾಟು ಮಾಡಿದರೂ ಸಾಲ ನೀಡಲಾಗುತ್ತದೆ. ಆದರೆ ರಾಜ್ಯದ ಮುಖ್ಯಮಂತ್ರಿ ಹಾಗೂ ಉಳಿದ ಸಚಿವರಿಗೆ ಹಲವು ಬಾರಿ ಭೇಟಿ ಮಾಡಿ ಸಹಾಯ ಕೇಳಿದರೂ ಕರ್ನಾಟಕ ಸರ್ಕಾರ ಸಹಾಯ ಹಸ್ತ ಚಾಚುತ್ತಿಲ್ಲ ಎಂದು ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ರಂಗಸ್ವಾಮಿ ಹೇಳಿದರು.