ಬೆಂಗಳೂರು : ತಮಿಳುನಾಡಿನ ಸರ್ಕಾರಿ ಬಸ್‌ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ತಡರಾತ್ರಿ ನಗರದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಸಮೀಪದಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಬಸ್‌ನ ಬಲಭಾಗದ ಕಿಟಕಿಗೆ ಹಾನಿಯಾಗಿದೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಚಾಲಕ ಗುಣಶೇಖರನ್ ದೂರಿನ ಮೇರೆಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಸ್ ಡಿಪೋಗೆ ಬಂದ ನಂತರ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ವಿಷಯವನ್ನು ತಮಿಳುನಾಡು ಸಾರಿಗೆ ಬಸ್ ಚಾಲಕರು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಬಸ್ ಚಾಲಕ ಚಾಮರಾಜಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಗಳ ಬಂಧನದ ಬಳಿಕ ಕೃತ್ಯಕ್ಕೆ ಕಾರಣ ತಿಳಿಯಲಿದೆ ಎಂದು ಚಾಮರಾಜಪೇಟೆ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಸರಗೋಡು: ಕುಂಬ್ಳೆ ಸಮೀಪ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲೇಟು
ಕೋಲಾರದಲ್ಲಿ ಜೆಸಿಬಿಗಳಿಗೆ ಕಲ್ಲು: ಕಳೆದ ಕೆಲವು ದಿನಗಳ ಹಿಂದೆ ಅರಣ್ಯಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಜೆಸಿಬಿಗಳ ಮೇಲೆ ಒತ್ತುವರಿದಾರರು ಕಲ್ಲು ತೂರಾಟ ನಡೆಸಿದ್ದರು. ಕೋಲಾರ ಜಿಲ್ಲೆಯಾದ್ಯಂತ ಅರಣ್ಯ ಇಲಾಖೆ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾಗಿದೆ. ಇದಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ. ಶ್ರೀನಿವಾಸಪುರ ತಾಲೂಕಿನ ನಾರಮಾಕಲಪಲ್ಲಿ ಗ್ರಾಮದ ಬಳಿ ನಡೆಯುತ್ತಿದ್ದ ಕಾರ್ಯಾಚರಣೆ ಸ್ಥಳಕ್ಕೆ ಸಂಸದ ಎಸ್.ಮುನಿಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ, ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಸಂಸದರು ಹರಿಹಾಯ್ದಿದ್ದರು. ಒತ್ತುವರಿದಾರರು ಸಂಸದರ ಮುಂದೆಯೇ ಐದು ಜೆಸಿಬಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದು, ಯಂತ್ರದ ಗಾಜುಗಳು ಪುಡಿಯಾಗಿದ್ದವು.