ಬೆಂಗಳೂರು: ಸುಸ್ಥಿರ ಗಣಿಗಾರಿಕೆ ಮಾಡುವುದು ಕಲ್ಲು ಉದ್ಯಮದ ಬಹಳ ದೊಡ್ಡ ಹೊಣೆಗಾರಿಕೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಮೈದಾನದಲ್ಲಿ ಭಾರತೀಯ ಗ್ರಾನೈಟ್ ಮತ್ತು ಗಣಿ ಉದ್ಯಮದ ಒಕ್ಕೂಟ ಆಯೋಜಿಸಿರುವ ಸ್ಟೋನಾ- STONA-2023 15 ನೇ ಅಂತಾರಾಷ್ಟ್ರೀಯ ಗ್ರಾನೈಟ್ ಮತ್ತು ಕಲ್ಲುಗಳ ವಸ್ತುಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನದಿಂದ ಗರಿಷ್ಠ ಬಳಕೆ ಕನಿಷ್ಠ ತ್ಯಾಜ್ಯದ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆ ಯಾಗಬೇಕು. ಆಧುನಿಕ ತಂತ್ರಜ್ಞಾನ ದಿಂದ ಗರಿಷ್ಠ ಬಳಕೆ ಹಾಗೂ ಕನಿಷ್ಠ ತ್ಯಾಜ್ಯ ಉತ್ಪಾದನೆಯಾಗಬೇಕು. ಸರ್ಕಾರಿ ನೀತಿಗಳನ್ನು ಸರಳೀಕರಣಗೊಳಿಸುತ್ತಿದ್ದು, ಗಣಿಗಾರಿಕೆ ಉದ್ಯಮ ಬೆಳೆಯಬೇಕು ಎಂದರು.
ಪರವಾನಗಿ ಮುಂತಾದವುಗಳನ್ನು ಮುಖ್ಯವಾಹಿನಿಗೆ ತರಬೇಕು. ಇದರಿಂದಾಗಿ ಯಾವ ಉದ್ಯಮಿಗೂ ಅನಗತ್ಯ ಕಿರುಕುಳ ಆಗಬಾರದು. ತೊಡಕಿನ ವಿಧಾನಗಳನ್ನು ತೆಗೆದುಹಾಕಲಾಗುವುದು. ಉದ್ಯಮವು ಇದರೊಂದಿಗೆ ಕಾರ್ಯನಿರ್ವಹಿಸಲು ಸಿದ್ಧರಿದ್ದರೆ, ಪಾರದರ್ಶಕತೆ ಹಾಗೂ ದಕ್ಷತೆ ತರಬಹುದಾಗಿದೆ. ಯಂತ್ರೋಪಕರಣಗಳ ಅಭಿವೃದ್ಧಿ ಯಾಗಿದ್ದು, ಇಟಲಿ ದೇಶ ಈ ನಿಟ್ಟಿನಲ್ಲಿ ಬಹಳ ದೊಡ್ಡ ಸಾಧನೆ ಮಾಡಿದೆ ಎಂದು ತಿಳಿಸಿದರು.
ಮಾಹಿತಿ ವಿನಿಮಯದ ವೇದಿಕೆಯಾಗಬೇಕು: ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳಿಗಿಂತ ಭಿನ್ನವಾದ ನೀತಿ ನಮ್ಮದಾಗಿದ್ದು, ಇಲ್ಲಿನ ಗಣಿಗಳಿಗೂ ಅಲ್ಲಿನ ಗಣಿಗಳಿಗೂ ಬಹಳ ವ್ಯತ್ಯಾಸವಿದೆ. ನಮ್ಮದೇ ಆದ್ಯತೆಗಳಿವೆ. ನಮ್ಮಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಕಬ್ಬಿಣದ ಅದಿರು ಲಭ್ಯವಿದೆ. ಉದ್ಯಮ ಸ್ನೇಹಿ ನೀತಿಗಳನ್ನು ರೂಪಿಸಲಾಗಿದ್ದು ರಾಜ್ಯದಲ್ಲಿ ಸುಲಭವಾಗಿ ವ್ಯವಹಾರ ಸಾಧ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕಾಯ್ದುಕೊಳ್ಳಬೇಕು. ಅದಕ್ಕಾಗಿ ಒಕ್ಕೂಟ ಮಾಹಿತಿ ವಿನಿಮಯದ ವೇದಿಕೆಯನ್ನು ಒದಗಿಸಿ, ಉತ್ಪಾದನೆ ಹಾಗೂ ಮಾರಾಟದಲ್ಲಿ ಸುಧಾರಣೆ ತರಲು ಪ್ರಯತ್ನಿಸಬೇಕು. ದೇಶವನ್ನು ಸದೃಢಗೊಳಿಸಲು ಈ ವೇದಿಕೆ ಕಾರಣವಾಗಬೇಕು ಎಂದು ಹೇಳಿದರು.
ಅವೈಜ್ಞಾನಿಕ ಗಣಿಗಾರಿಕೆ ಸಾಕಷ್ಟು ತ್ಯಾಜ್ಯ ಉತ್ಪಾದನೆಗೆ ಕಾರಣ: ಸುಸ್ಥಿರ ಗಣಿಗಾರಿಕೆಯನ್ನು ಕೈಗೊಳ್ಳಬೇಕು. ಹಾಗೆ ಮಾಡಿದಾಗ ದೇಶ, ಗಣಿಗಾರಿಕೆ ಹಾಗೂ ಆರ್ಥಿಕತೆಗೆ ಒಳ್ಳೆಯದು. ಮಿತಿಯಿಲ್ಲದ ಗಣಿಗಾರಿಕೆ ಮಾಡಿದರೆ ಭವಿಷ್ಯದಿಂದ ಕದ್ದಂತೆ ಆಗುವುದು. ಇದನ್ನು ಆಧುನಿಕ ತಂತ್ರಜ್ಞಾನ, ಯಂತ್ರೋಪಕರಣಗಳ ಬಳಕೆಯಿಂದ ಉದ್ಯಮದ ತ್ಯಾಜ್ಯ ಕಡಿಮೆಯಾಗಬೇಕು. ಅವೈಜ್ಞಾನಿಕ ಗಣಿಗಾರಿಕೆ ಸಾಕಷ್ಟು ತ್ಯಾಜ್ಯ ಉತ್ಪಾದನೆಗೆ ಕಾರಣವಾಗಿದೆ. ಇದು ಆರ್ಥಿಕತೆ ಹಾಗೂ ಮಾಲೀಕನಿಗೆ ನಷ್ಟ ಉಂಟುಮಾಡುತ್ತದೆ ಎಂದರು.
ಕಲ್ಲು ಗಣಿಗಾರಿಕೆಗೆ ಅವಕಾಶಗಳನ್ನು ಒದಗಿಸುವ ವೇದಿಕೆಯಾಗಿ ಸ್ಟೋನಾ ಕಾರ್ಯನಿರ್ವಹಿಸುತ್ತಿದೆ. ಕಲ್ಲು ಸೃಷ್ಟಿಯಾಗಲು ಸಾವಿರಾರು ವರ್ಷಗಳು ಬೇಕು. ಕಲ್ಲಿನ ಸೃಷ್ಟಿಯಲ್ಲಿ ನಿಸರ್ಗ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಲ್ಲು ಭೂಮಿಗೆ ಬಲ ನೀಡಿದೆ. ಮಾನವ ಅಭಿವೃದ್ಧಿಯಲ್ಲಿ ಕಲ್ಲು ಮುಖ್ಯ ಪಾತ್ರ ವಹಿಸಿದೆ. ಮಾನವ ಹಾಗೂ ಕಲ್ಲಿನ ಸಂಬಂಧ ಅತ್ಯಂತ ಪ್ರಾಚೀನವಾದುದು. ಕಲ್ಲಿನಿಂದ ನಾವು ಮನೆ, ಬಂಗಲೆ ಹಾಗೂ ದೇಶವನ್ನು ಕಟ್ಟಿಕೊಂಡಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ಮುಂದಿನ ವಾರ ಬಜೆಟ್ ಚರ್ಚೆ ಬಳಿಕ ಕಾಂಗ್ರೆಸ್ ಮುಂದಿನ ನಡೆಯೇನು?