ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರದ 'ಅಗ್ನಿಪಥ' ಯೋಜನೆಯ ವಿರುದ್ಧ ರಾಜ್ಯಾದ್ಯಂತ ಶಾಂತಿಯುತ ಸತ್ಯಾಗ್ರಹ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದ್ದು ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ದೇಶದ ಯುವಕರ ಭವಿಷ್ಯವನ್ನು ಅಸ್ಪಷ್ಟತೆಗೆ ತಳ್ಳುವ, ಯಾವುದೇ ದೂರದೃಷ್ಟಿ ಇಲ್ಲದೆ ಜಾರಿಗೆ ತರಲು ಸರ್ಕಾರವು ಪ್ರಯತ್ನಿಸುತ್ತಿರುವ ಅಗ್ನಿಪಥ ಯೋಜನೆಯ ವಿರುದ್ಧ ರಾಷ್ಟ್ರದಾದ್ಯಂತ ಯುವಕರು ರೊಚ್ಚಿಗೆದ್ದಿದ್ದು ಸತ್ಯಾಗ್ರಹಗಳನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಯುವಕರಲ್ಲಿ ಶಾಂತಿಯುತವಾಗಿ ಸತ್ಯಾಗ್ರಹಗಳನ್ನು ನಡೆಸುವಂತೆ ವಿನಂತಿಸುತ್ತಿದೆ. ಈ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿರುತ್ತದೆ. ಪಕ್ಷವು ಕೂಡಾ ಸತ್ಯಾಗ್ರಹ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಅದರಂತೆ, ಜೂ.27 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸತ್ಯಾಗ್ರಹಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಸತ್ಯಾಗ್ರಹಗಳಲ್ಲಿ ಯುವಕ,ಯುವತಿಯರು ಮತ್ತು ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ, ಎಲ್ಲಾ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನಗಳಲ್ಲಿ ಪ್ರತಿಭಟನೆ ನಡೆಯುವಂತೆ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.
ಇದನ್ನೂ ಓದಿ : ರಾಷ್ಟ್ರಪತಿ ವಿಚಾರಕ್ಕೆ ಕೈ-ಕಮಲ ಟ್ವೀಟ್ ವಾರ್: ಬಿಜೆಪಿಗೆ ಬುದ್ಧಿಗೆ ಮಂಕು ಕವಿದಿದೆ- ದಿನೇಶ್ ಗುಂಡೂರಾವ್