ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದಿಂದ ಪ್ರತಿ ವರ್ಷ ಕೊಡುವ 'ಹೋಮ್ ಮಿನಿಸ್ಟರ್ ಸ್ಪೆಷಲ್ ಆಪರೇಷನ್ ಮೆಡಲ್ ಅವಾರ್ಡ್' ಗೆ ರಾಜ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ತಂಡ ಆಯ್ಕೆಯಾಗಿದೆ.
ತ್ವರಿತ ಹಾಗೂ ಅಪರಾಧ ಪ್ರಕರಣ ಬೇಧಿಸಿ ವಿಶೇಷ ಕಾರ್ಯಾಚರಣೆ ನಡೆಸುವ ತಂಡಗಳಿಗೆ ಪ್ರತಿ ವರ್ಷ ಗೃಹ ಇಲಾಖೆ ಹೆಸರಿನಲ್ಲಿ ಆಯಾ ರಾಜ್ಯಗಳ ಪೊಲೀಸ್ ತಂಡಕ್ಕೆ ಕೇಂದ್ರ ಸರ್ಕಾರ ಪದಕ ನೀಡಿ ಗೌರವಿಸಲಿದೆ. ಅದೇ ರೀತಿ ನಗರದಲ್ಲಿ ಅಡಗಿಕೊಂಡಿದ್ದ ಉಗ್ರರನ್ನು ಪತ್ತೆ ಹಚ್ಚಿ ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದ ಪೊಲೀಸ್ ವಿಶೇಷ ತಂಡ ಈ ಬಾರಿ ಪ್ರಶಸ್ತಿಗೆ ಭಾಜನವಾಗಿದೆ.
ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರ ಮುಖರ್ಜಿ, ಡಿವೈಎಸ್ಪಿಗಳಾದ ಕುಮಾರ್, ಎಸ್.ಕೆ.ಉಮೇಶ್, ಸುಶೀಲಾ, ಪೇದೆಗಳಾದ ವೈ.ಶಂಕರ್ ಹಾಗೂ ಎನ್.ಪ್ರಕಾಶ್ ಪದಕ ಪಡೆಯುತ್ತಿದ್ದಾರೆ. ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಹಿಂದೂ ಮುಖಂಡರನ್ನು ಗುರಿಯಾಗಿಸಿಕೊಂಡು ವಿಧ್ವಸಂಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಆರೋಪಿ ಮೆಹಬುಬ್ ಪಾಷಾ ಸೇರಿದಂತೆ ಹಲವು ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದರು.
ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಐಜಿಯಾಗಿದ್ದ ಸೌಮೇಂದ್ರ ಮುಖರ್ಜಿ ಹಾಗೂ ತಂಡ ನಗರದ ಗುರಪ್ಪನಪಾಳ್ಯದ ಮನೆಯೊಂದರಲ್ಲಿ ಅಡಗಿಕೊಂಡಿದ್ದ ಉಗ್ರನನ್ನು ಪತ್ತೆ ಹಚ್ಚುವಲ್ಲಿ ಐಎಸ್ಡಿ ತಂಡ ಯಶಸ್ವಿಯಾಗಿತ್ತು.