ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ಸರ್ಕಾರ ಉತ್ತಮವಾದ ಶಿಕ್ಷಕರಿಗೆ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ. ಈ ವರ್ಷದ ಉತ್ತಮ ಶಿಕ್ಷಕರ ಪೈಕಿ ಇಬ್ಬರು ತಮ್ಮ ಮನದಾಳದ ಮಾತುಗಳನ್ನ 'ಈಟಿವಿ ಭಾರತ'ದ ಜೊತೆ ಹಂಚಿಕೊಂಡಿದ್ದಾರೆ.
ಇಬ್ಬರಲ್ಲಿ ಒಬ್ಬರು ರವೀಂದ್ರ ಕೃಷ್ಣ ಭಟ್ಟ ಸೂರಿ. ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರು.
ಪ್ರಾಥಮಿಕ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುವ ರವೀಂದ್ರ ಅವರು, ಸಮುದಾಯದ ಸಹಕಾರದೊಂದಿಗೆ ಸುಮಾರು 24 ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನಿಕ ವಿಜ್ಞಾನದ ಪ್ರಯೋಗಾಲಯ ನಿರ್ಮಾಣ ಹಾಗೂ 10 ಸಾವಿರ ಪುಸ್ತಕವಿರುವ ಗ್ರಂಥಾಲಯವನ್ನ ನಿರ್ಮಾಣ ಮಾಡಿದ್ದು, ಸಾರ್ವಜನಿಕರ ಬಳಕೆಗೆ ತೆರೆಯಲಾಗಿದೆ.
ನನ್ನ ಈ ಕಾರ್ಯವನ್ನ ನೋಡಿ ಸರ್ಕಾರ ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಖುಷಿ ತಂದಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಇನ್ನೊಬ್ಬರು ದಾವಣಗೆರೆಯ ಹೆಬ್ಬಾಳು ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಜಿ. ಹೆಚ್. ತಿಪ್ಪೇಸ್ವಾಮಿಯವರು ಕೂಡ, 2020 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
1998 ರಲ್ಲಿ ಶಿಕ್ಷಣ ಸೇವೆ ಆರಂಭಿಸಿದ ಇವರು, ಬಡ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಬಹುತೇಕ ಹಿಂದುಳಿದ ಮಕ್ಕಳೇ ಬರುವುದರಿಂದ ಸಮುದಾಯದ ಸಹಕಾರದೊಂದಿಗೆ ಮಕ್ಕಳಿಗೆ ಬೇಕಿರುವ ಸೌಕರ್ಯವನ್ನ ಒದಗಿಸುತ್ತಿದ್ದಾರೆ. ಮಕ್ಕಳನ್ನ ಹಾಸ್ಪೆಲ್ಗೆ ಸೇರಿಸಿ ಓದಿಸುವುದನ್ನು ಮಾಡಿದ್ದಾರೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ ರೈಲು ಮಾದರಿಯ ಪೇಟಿಂಗ್ ಮಾಡಿಸಿ, ಮಕ್ಕಳನ್ನ ಸೆಳೆಯುವ ಕೆಲಸ ಮಾಡಿದ್ದಾರೆ. ಇದೀಗ ಆ ಶಾಲೆಯ ದಾಖಲೆ ಸಂಖ್ಯೆಯು ಕೂಡ ಏರಿಕೆ ಆಗಿದೆ ಎಂದು ಅವರು ಸಂತಸದ ಮಾತುಗಳನ್ನ ಹಂಚಿಕೊಂಡಿದ್ದಾರೆ.