ಬೆಂಗಳೂರು: ಕರ್ನಾಟಕ ಕಳೆದ ವರ್ಷ ಕೋವಿಡ್ ಮತ್ತು ಸತತ ಅತಿವೃಷ್ಟಿಯಿಂದ ಸಂಪೂರ್ಣ ನಲುಗಿ ಹೋಗಿತ್ತು. ಆರ್ಥಿಕ ಮುಗ್ಗಟ್ಟಿನಿಂದ ಬಡವಾಗಿದ್ದ ಸರ್ಕಾರ ವಿಪತ್ತು ನಿರ್ವಹಣೆಗಾಗಿ ನೆಚ್ಚಿಕೊಂಡಿದ್ದು ವಿಪತ್ತು ನಿರ್ವಹಣಾ ನಿಧಿಯ ಅನುದಾನವನ್ನು. ಕೇಂದ್ರದಿಂದ ಬಿಡುಗಡೆಯಾದ ಸೀಮಿತ ವಿಪತ್ತು ನಿರ್ವಹಣಾ ನಿಧಿಯಿಂದ ಸರ್ಕಾರ ಈವರೆಗೆ ಮಾಡಿದ ಖರ್ಚು ವೆಚ್ಚ ಎಷ್ಟು ಎಂಬ ವರದಿ ಇಲ್ಲಿದೆ.
2020-2021ನೇ ಸಾಲು ಕರುನಾಡಿಗೆ ಡಬಲ್ ಟ್ರಬಲ್ ವರ್ಷ. ಒಂದೆಡೆ ಕೋವಿಡ್ ಮಹಾಮಾರಿಯ ರೌದ್ರಾವತಾರ. ಮತ್ತೊಂದೆಡೆ ಒಂದರ ಮೇಲೊಂದರಂತೆ ಮಳೆ ಸೃಷ್ಟಿಸಿದ ಅತಿವೃಷ್ಟಿ. ಇವೆರಡರ ಮಧ್ಯೆ ರಾಜ್ಯ ಅಕ್ಷರಶಃ ನಲುಗಿ ಹೋಗಿತ್ತು. ಬರಿದಾದ ಬೊಕ್ಕಸದಿಂದ ಸರ್ಕಾರಕ್ಕೆ ಈ ಎರಡು ವಿಪತ್ತು ನಿರ್ವಹಣೆಯೇ ಕಬ್ಬಿಣದ ಕಡಲೆಯಾಗಿತ್ತು. ವಿಪತ್ತು ನಿರ್ವಹಣೆಗಾಗಿ ರಾಜ್ಯ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ SDRF ಮತ್ತು NDRF ಹಣವನ್ನೇ ನೆಚ್ಚಿಕೊಂಡಿತ್ತು.
ಅತಿವೃಷ್ಟಿ ಮಧ್ಯೆ ಕೋವಿಡ್ ಗಾಗಿ ಬಿಡುಗಡೆ:
2020-21ನೇ ಸಾಲಿನಲ್ಲಿ ರಾಜ್ಯ ಮುಂಗಾರಿನ ಮುನಿಸು ಎದುರಿಸಬೇಕಾಯಿತು. ಆಗಸ್ಟ್ ಹಾಗೂ ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಸುರಿದ ಭಾರೀ ಮಳೆಗೆ ರಾಜ್ಯ 24,941 ಕೋಟಿ ರೂ. ನೆರೆ ಹಾನಿ ಅನುಭವಿಸಿದೆ. SDRF ನಡಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 1,054 ಕೋಟಿ ರೂ. ಹಂಚಿಕೆ ಮಾಡಿತ್ತು. ಆ ಪೈಕಿ ಬಹುತೇಕ ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಲಾಗಿತ್ತು.
SDRF ಅಡಿ ಸುಮಾರು 450 ಕೋಟಿ ರೂ.ವನ್ನು ಕೋವಿಡ್ ನಿರ್ವಹಣೆಗೆ ಬಳಸಲಾಗಿತ್ತು. ನೆರೆ ಪರಿಹಾರಕ್ಕೆ ಲಭಿಸಿದ್ದು ಕೇವಲ 276.08 ಕೋಟಿ ರೂ.ಮಾತ್ರ. ಕೇಂದ್ರ ಸರ್ಕಾರ ನವೆಂಬರ್ ನಲ್ಲಿ ನೆರೆ ಪರಿಹಾರ ಸಂಬಂಧ 577 ಕೋಟಿ ರೂ. NDRF ಹಣ ಬಿಡುಗಡೆ ಮಾಡಿತ್ತು.
![ಅನುದಾನದ ವಿವರ](https://etvbharatimages.akamaized.net/etvbharat/prod-images/12122068_198_12122068_1623602864126.png)
SDRF/NDRF ಮಾರ್ಗಸೂಚಿಯಂತೆ ಹಣ ಬಿಡುಗಡೆ:
ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿ ನಷ್ಟ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕೇಂದ್ರದಿಂದ ಅಲ್ಪ ನೆರವನ್ನು ಪಡೆದಿತ್ತು. ಅತಿವೃಷ್ಟಿಗೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಭಾರೀ ಬೆಳೆ ಹಾನಿ ಸಂಭವಿಸಿತ್ತು.
ಮಾರ್ಚ್ ಅಂತ್ಯದವರೆಗೆ ಬೆಳೆ ಹಾನಿ ಸಂಭವಿಸಿದ ರೈತರ ಖಾತೆಗೆ ಸುಮಾರು 650 ಕೋಟಿ ರೂ. ಇನ್‌ಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ. NDRF/SDRF ಮಾಗರ್ಸೂಚಿಯನ್ವಯ ರಾಜ್ಯ ಸರ್ಕಾರ 130.57 ಕೋಟಿ ರೂ. ಹಣವನ್ನು ಮನೆ ಹಾನಿ ಪರಿಹಾರಾರ್ಥವಾಗಿ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೆರೆಯಿಂದ ಹಾನಿಗೊಳಗಾದ ಮೂಲಭೂತ ಸೌಕರ್ಯಗಳ ತುರ್ತು ದುರಸ್ತಿಗಾಗಿ ವಿಪತ್ತು ನಿರ್ವಹಣಾ ನಿಧಿಯಿಂದ ಹಣ ಬಿಡುಗಡೆ ಮಾಡಿದೆ. ಸುಮಾರು 423 ಕೋಟಿ ರೂ. ಹಣವನ್ನು ಮೂಲಸೌಕರ್ಯಗಳ ತುರ್ತು ದುರಸ್ತಿ ಆಯಾ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ ಎಂದು ಕಂದಾಯ ಇಲಾಖೆ ಅಂಕಿ ಅಂಶ ನೀಡಿದೆ.
ಮೂಲಸೌಕರ್ಯಗಳ ತುರ್ತು ದುರಸ್ತಿಗಾಗಿ ಬಾಗಲಕೋಟೆಗೆ 28.75 ಕೋಟಿ, ಬೆಳಗಾವಿಗೆ 20.26 ಕೋಟಿ, ಬಳ್ಳಾರಿಗೆ 3 ಕೋಟಿ, ವಿಜಯಪುರ 33.27 ಕೋಟಿ, ಬೀದರ್ 21.42 ಕೋಟಿ, ಚಿಕ್ಕಮಗಳೂರಿಗೆ 27.62 ಕೋಟಿ, ಚಿತ್ರದುರ್ಗ 60 ಲಕ್ಷ, ದ.ಕನ್ನಡ 16.59 ಕೋಟಿ, ದಾವಣಗೆರೆ 1.99 ಕೋಟಿ, ಧಾರವಾಡ 21.95 ಕೋಟಿ, ಗದಗ 7.21 ಕೋಟಿ, ಕಲ್ಬುರ್ಗಿ 36.17 ಕೋಟಿ, ಹಾಸನ 26.39 ಕೋಟಿ, ಹಾವೇರಿ 25.99 ಕೋಟಿ, ಕೊಡಗು 47.68 ಕೋಟಿ, ಕೊಪ್ಪಳ 13.11 ಕೋಟಿ, ಮೈಸೂರು 8.25 ಕೋಟಿ, ರಾಯಚೂರು 18.54 ಕೋಟಿ, ಶಿವಮೊಗ್ಗ 13.05 ಕೋಟಿ, ಉಡುಪಿ 19.43 ಕೋಟಿ, ಉ.ಕನ್ನಡ 21.48 ಕೋಟಿ, ಯಾದಗಿರಿ 10.07 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.