ಬೆಂಗಳೂರು: ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ 2020ಅನ್ನು ಜಾರಿಗೆ ತರಲು ಮುಂದಾಗಿದೆ. ಈ ಪ್ರಸ್ತಾಪಿತ ತಿದ್ದುಪಡಿ ಮಸೂದೆಗೆ ಇದೀಗ ರಾಜ್ಯದ ರೈತರು ಹಾಗೂ ಕಾಂಗ್ರೆಸ್ನಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಕೇಂದ್ರ ಸರ್ಕಾರ ವಿದ್ಯತ್ ತಿದ್ದುಪಡಿ ಮಸೂದೆ 2020 ಜಾರಿಗೆ ಮುಂದಾಗಿದ್ದು, ಇದಕ್ಕಾಗಿ ಎಲ್ಲಾ ರಾಜ್ಯ ಸರ್ಕಾರಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ. ಈ ಸಂಬಂಧ ಕರ್ನಾಟಕ ಸರ್ಕಾರ ಕರಡು ತಿದ್ದುಪಡಿ ಮಸೂದೆ ಬಗ್ಗೆ ತನ್ನ ಅಭಿಪ್ರಾಯ ನೀಡಲಿದೆ. ಸರ್ಕಾರ ತನ್ನ ಅಭಿಪ್ರಾಯ ನೀಡುವ ಮುನ್ನ ರೈತರ ಸಲಹೆ ಸೂಚನೆ ಪಡೆಯುವ ಬಗ್ಗೆಯೂ ಬಲವಾದ ಕೂಗು ಕೇಳಿ ಬಂದಿದೆ. ಈ ಮಸೂದೆ ಜಾರಿಯಾದರೆ ರೈತರಿಗೆ ನೀಡುವ ಉಚಿತ ವಿದ್ಯುತ್ ರದ್ದಾಗಲಿದೆ. ಜೊತೆಗೆ ವಿದ್ಯುತ್ ವಲಯದ ಖಾಸಗೀಕರಣಕ್ಕೂ ಈ ಮಸೂದೆ ಇಂಬು ನೀಡಲಿದ್ದು, ವಿದ್ಯುತ್ ದರ ಹೆಚ್ಚಾಗುವ ಆತಂಕವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಈ ವಿದ್ಯುತ್ ತಿದ್ದುಪಡಿ ಮಸೂದೆಗೆ ತೆಲಂಗಾಣ, ತಮಿಳುನಾಡು, ಬಿಹಾರ, ಕೇರಳ ಸರ್ಕಾರ ತಮ್ಮ ವಿರೋಧ ವ್ಯಕ್ತಪಡಿಸಿವೆ.
ತಿದ್ದುಪಡಿ ಮಸೂದೆಯಲ್ಲಿ ಏನಿದೆ?:
ವೆಚ್ಚ ಆಧಾರಿತ ವಿದ್ಯುತ್ ಶುಲ್ಕ:
ಈಗಿರುವ ಕಾಯ್ದೆಯಲ್ಲಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ಶುಲ್ಕ ನಿಗದಿಗೊಳಿಸುವ ವೇಳೆ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ವಿದ್ಯುತ್ ಸಬ್ಸಿಡಿ ಆಧಾರದಲ್ಲಿ ವಿದ್ಯುತ್ ದರ ನಿಗದಿ ಮಾಡುತ್ತಿದೆ. ಕರಡು ತಿದ್ದುಪಡಿ ಮಸೂದೆಯಲ್ಲಿ ವಿದ್ಯುತ್ ಸರಬರಾಜು ವೆಚ್ಚದ ಆಧಾರದಲ್ಲಿ ವಿದ್ಯುತ್ ದರವನ್ನು ನಿಗದಿಗೊಳಿಸಲಾಗುತ್ತದೆ. ಸಬ್ಸಿಡಿಯನ್ನು ದರ ನಿಗದಿ ವೇಳೆ ಪರಿಗಣಿಸುವುದಿಲ್ಲ. ಜೊತೆಗೆ ಅಡ್ಡ ಸಹಾಯಧನ (ಕ್ರಾಸ್ ಸಬ್ಸಿಡಿ)ವನ್ನು ಕಡಿಮೆ ಮಾಡಲು ಪ್ರಸ್ತಾಪಿಸಲಾಗಿದೆ.
ಗ್ರಾಹಕರ ಖಾತೆಗೆ ಸಬ್ಸಿಡಿ ಹಣ:
ಪ್ರಸ್ತಾಪಿತ ಮಸೂದೆ ಪ್ರಕಾರ ಸಬ್ಸಿಡಿ ಹಣವನ್ನು ನೇರವಾಗಿ ಗ್ರಾಹಕರ ಖಾತೆಗೆ ಪಾವತಿಸಲಾಗುತ್ತದೆ. ಅದರ ಪ್ರಕಾರ ಗ್ರಾಹಕ ಮೊದಲಿಗೆ ತನ್ನ ಕಿಸೆಯಿಂದಲೇ ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕು. ಬಳಿಕ ಆತನ ಖಾತೆಗೆ ನೇರವಾಗಿ ಸಬ್ಸಿಡಿ ಹಣ ಪಾವತಿ ಮಾಡಲಾಗುತ್ತದೆ.
ರಾಷ್ಟ್ರೀಯ ಆಯ್ಕೆ ಸಮಿತಿ ರಚನೆ:
ಪ್ರಸ್ತಾಪಿತ ಮಸೂದೆಯಲ್ಲಿ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಮತ್ತು ಸದಸ್ಯನ ಆಯ್ಕೆಗಾಗಿ ರಾಷ್ಟ್ರೀಯ ಆಯ್ಕೆ ಸಮಿತಿ ರಚಿಸಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ಅಧಿಕಾರ ಮೊಟಕುಗೊಳ್ಳಲಿದ್ದು, ಕೇಂದ್ರ ಸರ್ಕಾರ ಆಯ್ಕೆ ಸಮಿತಿ ಮೂಲಕ ಕೇಂದ್ರೀಕೃತ ತೀರ್ಮಾನ ಕೈಗೊಳ್ಳಲಿದೆ.
ಉಪ ಪರವಾನಗಿ ಮತ್ತು ಫ್ರಾಂಚೈಸಿ ವಿತರಣೆ:
ಈ ಹೊಸ ಮಸೂದೆಯಲ್ಲಿ ವಿದ್ಯುತ್ ವಿತರಣೆ ಲೈಸನ್ಸ್ದಾರ ವಿದ್ಯುತ್ ವಿತರಿಸುವ ಜವಾಬ್ದಾರಿಯನ್ನು ಉಪ ಲೈಸನ್ಸ್ದಾರನಿಗೆ ನೀಡಬಹುದಾಗಿದೆ. ಉಪ ಲೈಸನ್ಸ್ದಾರ ನಿಗದಿತ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಮಾಡಬಹುದಾಗಿದೆ. ಉದಾಹರಣೆಗೆ ಬೆಸ್ಕಾಂ ತನ್ನ ವ್ಯಾಪ್ತಿಯ ನಿಗದಿತ ಪ್ರದೇಶಕ್ಕೆ ವಿದ್ಯುತ್ ಪೂರೈಸುವ ಉಪ ಪರವಾನಗಿಯನ್ನು ಖಾಸಗಿ ಸಂಸ್ಥೆಗೆ ನೀಡಬಹುದಾಗಿದೆ. ಆ ಮೂಲಕ ವಿದ್ಯುತ್ ಸರಬರಾಜಿನಲ್ಲಿ ಖಾಸಗೀಕರಣಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ.
ವಿದ್ಯುತ್ ತಜ್ಞರ ಅಭಿಪ್ರಾಯ:
ಹೊಸ ವಿದ್ಯುತ್ಚ್ಛಕ್ತಿ ತಿದ್ದುಪಡಿ ಮಸೂದೆಯಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಕೆಲ ಪಾರದರ್ಶಕತೆ ತರುವ ಅಂಶಗಳಿವೆ. ಆದರೆ ಇನ್ನೂ ಸ್ಪಷ್ಟತೆ ಬರಬೇಕಾಗಿದೆ ಎಂದು ವಿದ್ಯತ್ ಕ್ಷೇತ್ರದ ತಜ್ಞ ಪ್ರಭಾಕರ್ ಅಭಿಪ್ರಾಯ ಪಟ್ಟಿದ್ದಾರೆ. ಸಬ್ಸಿಡಿ ಹಣವನ್ನು ನೇರವಾಗಿ ಗ್ರಾಹಕರ ಖಾತೆಗೆ ವರ್ಗಾಯಿಸಲಾಗುತ್ತದೆ. ಅದರ ಮೂಲಕ ಗ್ರಾಹಕರು ನಿರಂತರ ವಿದ್ಯುತ್ ಸರಬರಾಜನ್ನು ಇನ್ನಷ್ಟು ಅಧಿಕಾರಯುತದಿಂದ ಕೇಳಬಹುದಾಗಿದೆ ಎಂದು ತಿಳಿಸಿದ್ದಾರೆ.
ರೈತರ ಆಕ್ರೋಶ ಏನು:
ಇತ್ತ ರೈತರು ಕೇಂದ್ರದ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಈ ಪ್ರಸ್ತಾಪಿತ ಮಸೂದೆ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರವಾಗಿದೆ. ಆ ಮೂಲಕ ರೈತರಿಗೆ ನೀಡುವ ಉಚಿತ ವಿದ್ಯುತ್, ಸಬ್ಸಿಡಿಗೆ ಕತ್ತರಿ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ನಮ್ಮ ಪ್ರಬಲ ವಿರೋಧವಿದ್ದು, ರಾಜ್ಯ ಸರ್ಕಾರ ಈ ತಿದ್ದುಪಡಿ ಮಸೂದೆಯನ್ನು ವಿರೋಧಿಸಬೇಕು. ಇಲ್ಲವಾದರೆ ರೈತ ವಿರೋಧಿ ಮಸೂದೆ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.