ಬೆಂಗಳೂರು : ಸಿಎಂ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಬೆಳಗ್ಗೆ 12.30ಕ್ಕೆ ವಿಧಾನಸೌಧದಲ್ಲಿ ಸಭೆ ನಡೆಯಲಿದೆ. ಇಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಕರ್ನಾಟಕ ವಿವಿ ತಿದ್ದುಪಡಿ ವಿಧೇಯಕ, ಕಲಬುರಗಿ ವಿವಿ ವಿಭಜಿಸಿ ಪ್ರತ್ಯೇಕ ರಾಯಚೂರು ವಿವಿ ಸ್ಥಾಪನೆಗೆ ಒಪ್ಪಿಗೆ ನೀಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆಗೆ ಒಪ್ಪಿಗೆ ಸಾಧ್ಯತೆ ಇದ್ದು, 1666.73 ಎಕರೆ ಜೆಎಸ್‌ಡಬ್ಲ್ಯೂ ಸ್ಟೀಲ್‌ಗೆ ನೀಡುವ ಬಗ್ಗೆ ಚರ್ಚೆ ಆಗಲಿದೆ. ತೋರಣಗಲ್, ಕರೇಕುಪ್ಪ ಗ್ರಾಮದಲ್ಲಿನ ಗಣಿಭೂಮಿ, ಕರ್ನಾಟಕ ಮುನ್ಸಿಪಲ್ ಕಾಯ್ದೆ ತಿದ್ದುಪಡಿ, ಮೈಸೂರು ಕುಡಿಯುವ ನೀರು ಯೋಜನೆಗೆ ಹೆಚ್ಚುವರಿ ಅನುದಾನ ನೀಡುವುದು ಸಭೆಯಲ್ಲಿ ಚರ್ಚೆಗೆ ಬರಲಿದೆ.
ಬಿಎಲ್ಡಿಇ ಸಂಸ್ಥೆಗೆ 12.584 ಚದರ ಯಾರ್ಡ್ ಭೂಮಿ ಗುತ್ತಿಗೆ ಆಧಾರದಲ್ಲಿ ನೀಡಿದ್ದು, ಈ ಭೂಮಿ ಖಾಯಂಗೊಳಿಸುವ ಸಾಧ್ಯತೆ ಇದೆ. ಅದಿಮ ಸಾಂಸ್ಕೃತಿಕ ಸಂಸ್ಥೆಗೆ 3 ಎಕರೆ ಭೂಮಿ ಬಗ್ಗೆ ಚರ್ಚೆ ಆಗಲಿದೆ. ಕೋಲಾರದ ಪಾಪರಾಜನಹಳ್ಳಿ ಬಳಿಯ ಜಮೀನು, ಕಾರ್ಕಳದಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆ ಜಾರಿಗೆ ತರುವ ಸಂಬಂಧ ಚರ್ಚೆ ಆಗಲಿದೆ. ಚಿತ್ತಾಪುರದಲ್ಲಿ 45 ಎಕರೆಯಲ್ಲಿ ಪಾರ್ಕ್ ಸ್ಥಾಪನೆ, ಅರಣ್ಯ ಇಲಾಖೆಗೆ ಜಮೀನು ನೀಡಲು ಸಮ್ಮತಿ ಸಾಧ್ಯತೆ ಇದ್ದು, ಅಫ್ಜಲ್‌ಪುರದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ 35.05 ಕೋಟಿ ರೂ. ಅನುದಾನ ನೀಡುವ ಬಗ್ಗೆ ಚರ್ಚೆ, ಹಾಸನ ರಸ್ತೆ ಅಭಿವೃದ್ಧಿಗೆ 200 ಕೋಟಿಗೆ ಒಪ್ಪಿಗೆ ಸಿಗಲಿದೆ ಎಂಬ ಮಾಹಿತಿ ಇದೆ.