ಬೆಂಗಳೂರು: ಗಣಿಗಾರಿಕೆ ಮತ್ತು ಸಾಗಣಿಕೆಗೆ 24 ತಾಸು ಅನುಮತಿ ನೀಡುವ ವಿವಾದಿತ ಪ್ರಸ್ತಾವನೆಗೆ ಇಂದು ನಡೆದ ಸಚಿವ ಸಂಪುಟ ಸಭೆ ಬ್ರೇಕ್ ಹಾಕಿದೆ.
ಬೃಹತ್ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ರಾಜ್ಯದ ಪ್ರಮುಖ ಗಣಿ ಪ್ರದೇಶಗಳಲ್ಲಿ ದಿನದ 24 ತಾಸು ಗಣಿಗಾರಿಕೆ ಹಾಗೂ ಸಾಗಣಿಕೆ ಮಾಡಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ಈ ವಿವಾದಾತ್ಮಕ ಪ್ರಸ್ತಾವನೆ ವಿಷಯದ ಬಗ್ಗೆ ಚರ್ಚೆ ನಡೆಸದ ಸಚಿವ ಸಂಪುಟ ಸಭೆ, ಅಜೆಂಡಾ ವಿಷಯವನ್ನು ಮುಂದಕ್ಕೆ ಹಾಕಿದೆ.
ಇನ್ನು ಮೂರು ಖಾಸಗಿ ವಿವಿ ರಚನೆ ಸಂಬಂಧಿತ ವಿಧೇಯಕಗಳ ಬಗ್ಗೆ ಪರಿಶೀಲಿಸಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ದಿ ನ್ಯೂ ಹಾರಿಜಾಂಟಲ್ ವಿವಿ ಬಿಲ್, ಎಟ್ರಿಯಾ ವಿವಿ ಬಿಲ್, ಆಚಾರ್ಯ ವಿವಿ ಬಿಲ್ ಸಂಬಂಧ ಯುಜಿಸಿ ಮಾರ್ಗಸೂಚಿಯನ್ವಯ ಪರಿಶೀಲನೆ ನಡೆಸಲು ಸಂಪುಟ ಉಪಸಮಿತಿ ರಚನೆಗೆ ತೀರ್ಮಾನಿಸಿದೆ. ಸಚಿವ ಸಂಪುಟ ಸಭೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ತಜ್ಞರ ಸಮಿತಿ ನೀಡಿರುವ ವರದಿಗೆ ತಾತ್ವಿಕ ಒಪ್ಪಿಗೆ ನೀಡಿದೆ.
ಇತರ ಪ್ರಮುಖ ತೀರ್ಮಾನ ಏನು? :
- ಭದ್ರಾ ಮೇಲ್ದಂಡೆ ಯೋಜನೆ ಪರಿಷ್ಕೃತ ಅಂದಾಜು 21,473 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸಚಿವ ಸಂಪುಟ ಸಭೆ ಶಿಫಾರಸು ಮಾಡಿದೆ.
- ಲೋಕೋಪಯೋಗಿ ಇಲಾಖೆ ಆನಂದ್ ರಾವ್ ವೃತ್ತ ಬಳಿ ನಿರ್ಮಿಸಲು ಉದ್ದೇಶಿಸಿರುವ ಅವಳಿ ಕಟ್ಟಡದ ನಿರ್ಮಾಣಕ್ಕಾಗಿ 1,251 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ.
- ಖಾಸಗಿ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣೆ ತಿದ್ದುಪಡಿ ವಿಧೇಯಕ 2020ಕ್ಕೆ ಅನುಮೋದನೆ.
- ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ರಕ್ಷಣಾ ವಿಧೇಯಕ 2020ಕ್ಕೆ ಅನುಮೋದನೆ.
- ಕರ್ನಾಟಕ ಶಿಕ್ಷಣ ಇಲಾಖೆ ಸೇವಾ ನಿಯಮವಳಿ ತಿದ್ದುಪಡಿ ವಿಧೇಯಕ 2020ಕ್ಕೆ ಅನುನೋದನೆ.
- ತೋಟಗಾರಿಕೆ ವಿಜ್ಞಾನ ವಿವಿ ತಿದ್ದುಪಡಿ ವಿಧೇಯಕ 2020ಕ್ಕೆ ಅನುಮೋದನೆ.
- ಸಾಲು ಮರದ ತಿಮ್ಮಕ್ಕರಿಗೆ ಕೃಷಿ ಉದ್ದೇಶಕ್ಕಾಗಿ ಕಡೂರು ಹೋಬಳಿ ಮಾಗಡಿ ತಾಲೂಕು ಮಾದಿಗೊಂಡನ ಹಳ್ಳಿಯಲ್ಲಿ 3 ಎಕರೆ ಗೋಮಾಳ ಭೂಮಿ ಮಂಜೂರು.
- ಉಡುಪಿ ಜಿಲ್ಲೆಯಲ್ಲಿ ಕೊಡಚಾದ್ರಿಯಿಂದ-ಕೊಲ್ಲೂರುವರೆಗೆ ರೋಪ್ ವೇ ನಿರ್ಮಾಣಕ್ಕಾಗಿ 101 ಎಕರೆ ಜಮೀನು ನೀಡಲು ತೀರ್ಮಾನ.