ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಭಾಗಿಯಾಗಲು ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇದೀಗ ಕುಮಾರ ಕೃಪಾ ಅತಿಥಿ ಗೃಹ ತಲುಪಿದ್ದಾರೆ.
ಒಂದಿಷ್ಟು ವಿಳಂಬವಾಗಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಇದೀಗ ಕುಮಾರ ಕೃಪ ಅತಿಥಿ ಗೃಹಕ್ಕೆ ಆಗಮಿಸಿ ತಂಗಿದ್ದು, ಕೆಲ ನಾಯಕರನ್ನು ಭೇಟಿ ಮಾಡಲಿದ್ದಾರೆ. ಸಂಜೆ 3 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪದಗ್ರಹಣದ ಸಮಾರಂಭ ನಡೆಯಲಿದ್ದು ನೇರವಾಗಿ ಇಲ್ಲಿಂದ ಅವರು ರಾಜಭವನಕ್ಕೆ ತೆರಳಲಿದ್ದಾರೆ.
ಕುಮಾರ ಕೃಪಾ ಅತಿಥಿಗೃಹಕ್ಕೆ ಆಗಮಿಸಿದ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂರು ವಿಚಾರಗಳತ್ತ ನಮ್ಮ ಗಮನ ಇದೆ. ಸಮಾಜದ ಹಿತ ಕಾಯುವತ್ತ, ರಾಜ್ಯ ಅಭಿವೃದ್ಧಿ ಹಾಗೂ ಸಮಾಜದ ಅಭಿವೃದ್ಧಿಗಾಗಿ ಬಡವರತ್ತ ಗಮನ ಕೊಡಬೇಕಿದೆ ಎಂದರು.
ಇದೇ ವೇಳೆ ಸರ್ಕಾರ ರಚನೆಗೆ ಸಹಕರಿಸಿದ ಶಾಸಕ ಮುನಿರತ್ನಗೆ ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಹಾಗೂ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚಿವ ನಾಗೇಶ್ ರನ್ನು ಸಚಿವ ಸ್ಥಾನದಿಂದ ಕೈ ಬಿಡುತ್ತಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಮಾಧ್ಯಮ ಪ್ರತಿಕ್ರಿಯೆಗೆ ಚುಟುಕಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಬಹುತೇಕ ಜನ ಶಾಸಕರು ಮಂತ್ರಿ ಆಗಲು ಅರ್ಹರು. ಆದರೆ ಎಲ್ಲರೂ ಮಂತ್ರಿಯಾಗಲು ಸಾಧ್ಯವಿಲ್ಲ ನಿಯಮಿತ ಮಂತ್ರಿಸ್ಥಾನ ಇರುವುದರಿಂದ ಹೀಗೆ ಮಿತಿ ಹಾಕಲಾಗಿದೆ ಎಂದು ತಿಳಿಸಿದರು.