ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಿರೋಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಅವರ ಆತ್ಮಹತ್ಯೆ ಸಂಬಂಧ ಮಾಹಿತಿ ಸಂಗ್ರಹಿಸಲು ಬಿಜೆಪಿ ರಾಜ್ಯ ತಂಡವನ್ನು ನೇಮಿಸಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ನಾಳೆ (ಭಾನುವಾರ) ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ್ ಜಾಧವ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಶಾಸಕ ಬಸವರಾಜ ಮತ್ತೀಮೂಡ್, ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ಶಾಸಕ ಶರಣು ಸಲಗಾರ್, ಬಿ.ಜಿ. ಪಾಟೀಲ್, ಡಾ. ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಿ ಅವರ ತಂಡ ಸ್ಥಳಕ್ಕೆ ತೆರಳಲಿದೆ.
ಶಿರೋಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ನನ್ನ ಸಾವಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಚಿವ ಶರಣಪ್ರಕಾಶ್ ಪಾಟೀಲ್ ಕಾರಣ ಎಂದು ಮೂರು ಆಡಿಯೋ ರೆಕಾರ್ಡ್ ಮಾಡಿಟ್ಟು ಅಕ್ಟೋಬರ್ 18ರ ಸಂಜೆ ಶಿವಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದ. ಈ ಹಿನ್ನೆಲೆ ಬಿಜೆಪಿ ನಾಯಕರು ಸಚಿವ ಶರಣಪ್ರಕಾಶ್ ಪಾಟೀಲ್ ರಾಜೀನಾಮೆಗೆ ಪಟ್ಟು ಹಿಡಿದಿದ್ದರು.
ಸಚಿವ ಶರಣಪ್ರಕಾಶ ಪಾಟೀಲ್ ಪ್ರತಿಕ್ರಿಯೆ: ನಿನ್ನೆ(ಶುಕ್ರವಾರ) ಕಲಬುರಗಿಯಲ್ಲಿ ಮಾತನಾಡಿದ್ದ ಸಚಿವ ಶರಣಪ್ರಕಾಶ ಪಾಟೀಲ್, ''ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರು ಅನ್ನೋದೆ ನನಗೆ ಗೊತ್ತಿಲ್ಲ. ಬಿಜೆಪಿ ಮುಖಂಡರು ಸೋಲಿನ ಹತಾಶೆಯಿಂದ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆಯಲ್ಲಿ ಆತ್ಮಹತ್ಯೆಗೆ ಕಾರಣ ಏನು? ಆ ಆಡಿಯೋ ಎಲ್ಲಿಂದ ಬಂದಿದೆ ಎನ್ನೊದು ಪತ್ತೆಯಾಗಲಿದೆ'' ಎಂದು ತಿಳಿಸಿದ್ದರು.
ಶರಣಪ್ರಕಾಶ ಪಾಟೀಲ್ ರಾಜೀನಾಮೆ ನೀಡುವ ಅಗತ್ಯವಿಲ್ಲ- ಪ್ರಿಯಾಂಕ್ ಖರ್ಗೆ: ಈ ಕುರಿತು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ, ''ಮೃತನ ಕುಟುಂಬಸ್ಥರು ಸಾಲ ಮಾಡಿಕೊಂಡ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿಯವರು ಆ ಕುಟುಂಬಸ್ಥರನ್ನು ಮೀರಿ ಮಾತನಾಡುತ್ತಿದ್ದಾರೆ. ಪ್ರಕರಣ ಈಗಾಗಲೇ ಸಿಐಡಿ ತನಿಖೆಗೆ ನೀಡಲಾಗಿದೆ. ಶರಣಪ್ರಕಾಶ ಪಾಟೀಲ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ'' ಎಂದು ಹೇಳಿದ್ದರು.
''ಪತಿ ಶಿವಕುಮಾರ ಪೂಜಾರಿ 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲದ ಚಿಂತೆಯಲ್ಲಿ ಮದ್ಯ ಸೇವಿಸುತ್ತಿದ್ದರು. ಮಳೆಯಾಗದ ಹಿನ್ನೆಲೆ ಹೆಸರು ಬೆಳೆ ಸಂಪೂರ್ಣ ಹಾಳಾಗಿತ್ತು. ಸಾಲ ತೀರಿಸುವುದು ಹೇಗೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಆತ್ಮಹತ್ಯೆ ಪ್ರಕರಣದಲ್ಲಿ ಯಾರ ಮೇಲೆಯೂ ಸಂಶಯವಿಲ್ಲವೆಂದು'' ಮೃತ ಶಿವಕುಮಾರನ ಪತ್ನಿ ಮಲ್ಲಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಭೀಮಾತಿರದಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ: ಯುವಕನ ಬರ್ಬರ ಹತ್ಯೆ