ಬೆಂಗಳೂರು: ಕೊರೊನಾ ಹಿನ್ನೆಲೆ ಸಂಕಷ್ಟಕ್ಕೊಳಗಾದ ದುರ್ಬಲ ವರ್ಗಗಳ ನೆರವಿಗೆ ಅನೇಕ ಕ್ರಮಗಳನ್ನು ಕೈಗೊಂಡಿರುವ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಇದೀಗ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ "ಹೆಲ್ಪ್ ಲೈನ್" ಆರಂಭಿಸಿದೆ.
ಕಾನೂನು ಸೇವಾ ಪ್ರಾಧಿಕಾರದ ರಾಜ್ಯ ಮಟ್ಟದ ಹೆಲ್ಪ್ಲೈನ್ ಈಗಾಗಲೇ ಕಾರ್ಯಾಚರಣೆಯಲ್ಲಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿರುವುದರಿಂದ ದೂರದ ಬೇರೆ ಜಿಲ್ಲೆಗಳಿಂದ ರಾಜ್ಯ ಮಟ್ಟದ ಹೆಲ್ಪ್ ಲೈನ್ಗೆ ಕರೆ ಬಂದರೆ ಅದನ್ನು ಸಂಬಂಧಿಸಿದ ಜಿಲ್ಲಾಡಳಿತಕ್ಕೆ ವರ್ಗಾಯಿಸಿ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿದೆ. ಈ ಹಿನ್ನೆಲೆ ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ಮಟ್ಟದಲ್ಲಿ ಪ್ರತಿ ಜಿಲ್ಲೆಗೆ ಎರಡು ಹೆಲ್ಪ್ ಲೈನ್ ಆರಂಭಿಸಲಾಗಿದೆ.
ಕೊರೊನಾ ಕಷ್ಟ ಕಾಲದಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು, ಬುದ್ದಿಮಾಂಧ್ಯರು, ಕಾರ್ಮಿಕರು ಸೇರಿದಂತೆ ಸಮಾಜದ ದುರ್ಬಲ ವರ್ಗಗಳಿಗೆ ಚಿಕಿತ್ಸೆ, ಆಕ್ಸಿಜನ್, ಬೆಡ್ ವ್ಯವಸ್ಥೆ ಇತ್ಯಾದಿ ಕೊರೊನಾ ಸಂಬಂಧಿತ ಸೇವೆಗಳನ್ನು ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹಾಗಿದ್ದೂ ತೊಂದರೆಗಳಿದ್ದರೆ ಸಾರ್ವಜನಿಕರು ಹೆಲ್ಪ್ ಲೈನ್ ಗಳಿಗೆ ಸಂಪರ್ಕಿಸಬಹುದು ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ್ ಶೆಟ್ಟಿ ತಿಳಿಸಿದ್ದಾರೆ.