ಬೆಂಗಳೂರು: ನಮ್ಮ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಪರೀಕ್ಷೆ ರದ್ದು ಮಾಡಲಾಗಿದೆ. ಆ ರಾಜ್ಯಗಳಲ್ಲಿ ಮೂರು ಹಂತದ ಶಿಕ್ಷಣ ಪದ್ಧತಿ ಜಾರಿಗೆ ತರಲಾಗಿದೆ. ಹೀಗಾಗಿ ಅವರಿಗೆ 10ನೇ ತರಗತಿ ಪರೀಕ್ಷೆ ಕಡ್ಡಾಯವಲ್ಲ. ಆದರೆ ನಮ್ಮ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಬೇರೆ ರೀತಿ ಇದೆ. ಈಗ ಪರೀಕ್ಷೆ ನಡೆಸದಿದ್ದರೆ ಮುಂದೆ ಸಮಸ್ಯೆಗಳಾಗುತ್ತವೆ ಎಂದು ಹೇಳಿದರು.
ಪಿಯುಸಿ ಅಥವಾ ಮುಂದಿನ ಯಾವುದೇ ತರಗತಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರಲೇಬೇಕು. ಪರೀಕ್ಷೆ ಬರೆಯದಿದ್ದರೆ ಮುಂದಿನ ತರಗತಿಗಳಿಗೆ ಹೋಗಲು ತೊಂದರೆಯಾಗುತ್ತದೆ ಎಂದರು.
ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ವಸೂಲಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವ ಶೇ. 90ರಷ್ಟು ಪೋಷಕರು ಬಡವರಿಲ್ಲ. ಆಂಗ್ಲ ಮಾಧ್ಯಮ ಬಯಸಿದರು ಶ್ರೀಮಂತರು, ಶುಲ್ಕ ಕಟ್ಟಲಿ. ಆದರೆ ಆದ್ಯತೆ ಮೇರೆಗೆ ಬಡವರಿಗೆ ವಿನಾಯಿತಿ ಕೊಡಬೇಕು ಎಂದು ಹೇಳಿದ ಹೊರಟ್ಟಿ, ಆರ್ಟಿಇ ಅಡಿಯ ಹಣ ಬಿಡುಗಡೆ ಮಾಡಬೇಕು. ಮಕ್ಕಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿಸಬಾರದು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.