ಬೆಂಗಳೂರು: 2020- 2021ನೇ ಸಾಲಿನಲ್ಲಿ ಜೂನ್ ತಿಂಗಳಲ್ಲಿ ನಡೆಯುವ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಶಾಲಾ ಕಾಲೇಜುಗಳಿಂದ ಹಾಜರಾಗುವ ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದಲ್ಲದೆ ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳು ಕೂಡ ಈ ಪರೀಕ್ಷೆಗೆ ನೋಂದಾಯಿಸಲು ಅರ್ಜಿಗಳನ್ನು ಶಾಲೆಗಳ ಮುಖಾಂತರ ಸಲ್ಲಿಸಬಹುದಾಗಿದೆ. ಹೀಗಾಗಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿನ ಜೂನ್-2021ರ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳ (CLERF, ಖಾಸಗಿ ಅಭ್ಯರ್ಥಿಗಳ (CCEPF) ಮತ್ತು ಪುನರಾವರ್ತಿತ ಅಭ್ಯರ್ಥಿಗಳ (CCERR, CCEPR, NSR ಮತ್ತು NSPR) ವಿವರಗಳನ್ನು ಮಂಡಳಿಯ WWW.Sslc.karnataka.gov.inಜಾಲತಾಣದ ಶಾಲಾ ಲಾಗಿನ ಮೂಲಕ ಅಪ್ಲೋಡ್ ಮಾಡಲು ಸೂಚಿಸಿದೆ.
ಮಂಡಳಿಯ ಕಾಯ್ದೆ-1966 ನಿಯಮ-37 ರನ್ವಯ, ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಶಾಲೆ ಕಾರ್ಯ ನಿರ್ವಹಿಸಲು ನಿಗಧಿಪಡಿಸಿರುವ ದಿನಗಳಿಗೆ ಅನುಸಾರ ಕನಿಷ್ಠ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿರುತ್ತದೆ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗವು ದೇಶವ್ಯಾಪಿ ಹರಡಿರುವ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಪರೀಕ್ಷೆಗೆ "ಕನಿಷ್ಠ ಹಾಜರಾತಿಗೆ ವಿನಾಯಿತಿ" ನೀಡಲಾಗಿದೆ.ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಪ್ರಥಮ ಭಾಷೆಗೆ 25 ಅಂಕಗಳಿಗೆ ಹಾಗೂ ಉಳಿದ ಐದು ವಿಷಯಗಳಿಗೆ 20 ಅಂಕಗಳಿಗೆ ಪರಿವರ್ತಿಸಿ ಅಂಕಗಳನ್ನು ಮಂಡಳಿ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಭರ್ತಿ ಮಾಡಲಾಗಿದೆಯೇ ಎಂಬುದನ್ನು ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ದೃಢೀಕರಿಸಿಕೊಳ್ಳಬೇಕು. ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಒಮ್ಮೆ ಮಂಡಳಿ ಜಾಲತಾಣದ ಶಾಲಾ ಲಾಗಿನ್‌ನ ಮುಖಾಂತರ ಸಲ್ಲಿಸಿದ ನಂತರ ಪರಿಷ್ಕರಿಸಲು ಅವಕಾಶವಿರುವುದಿಲ್ಲ ಅಂತ ಮಂಡಳಿ ತಿಳಿಸಿದೆ.
ಒಟ್ಟು 40 ಪುಟಗಳ ಮಾರ್ಗಸೂಚಿ ಪ್ರಕಟಿಸಿದ್ದು, ಶೈಕ್ಷಣಿಕ ವಿಭಾಗ, ಅಂಕ ಮತ್ತು ಶ್ರೇಣೆ, ಮಾನದಂಡಗಳು, ಪುಠ್ಯಪುಸ್ತಕ ಪರಿಷ್ಕರಣೆ ಹೀಗೆ ಹತ್ತು ಹಲವು ವಿಷಯಗಳನ್ನೊಳಗೊಂಡಿದೆ.