ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಿ, ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಹೇಳಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಬ್ಬರು ಜೊತೆಯಲ್ಲೇ ಹುಬ್ಬಳ್ಳಿಗೆ ತೆರಳಿದ್ದು, ಅಲ್ಲಿ ಚರ್ಚೆ ನಡೆಸಲಿದ್ದಾರೆ. ಆದರೆ, ಏನೇ ಚರ್ಚೆ ಮಾಡಿದರೂ ಸಂಪುಟ ವಿಸ್ತರಣೆ ಆಗುವುದಿಲ್ಲ. ಕಾರಣ, ನಾಳೆ ಯಡಿಯೂರಪ್ಪನವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅವರು ಬಂದ ನಂತರ ಸಂಪುಟ ವಿಸ್ತರಣೆ ಆಗಲಿದೆ ಎಂದರು.
ಎಷ್ಟು ಮಂದಿಗೆ ಸಚಿವ ಸ್ಥಾನ ನೀಡುತ್ತಾರೋ ಗೊತ್ತಿಲ್ಲ. ಸಾಧ್ಯವಾದರೆ ನನಗೂ ಒಂದು ಅವಕಾಶ ಕೊಡಿ ಸರ್, ಕೆಲಸ ಮಾಡಿ ತೋರಿಸುತ್ತೇನೆ ಅಂತ ಮೊನ್ನೆ ಸಿಎಂ ಯಡಿಯೂರಪ್ಪ ಅವರಿಗೆ ಹೇಳಿದ್ದೇನೆ ಎಂದರು.
ಯಲಹಂಕದ ಸೃಷ್ಟಿ ಆರ್ಟ್ ಕಾಲೇಜಿನ ಗೋಡೆಗಳಲ್ಲಿ ಮೋದಿಯವರ ಅವಹೇಳನಕಾರಿ ಚಿತ್ರ ಬಿಡಿಸಿದ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ ವಿಶ್ವನಾಥ್, ಕಾಲೇಜಿನ ವಿದ್ಯಾರ್ಥಿಗಳು ರಸ್ತೆಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದರು. ರಸ್ತೆಯಲ್ಲಿ, ಸಾರ್ವಜನಿಕವಾಗಿ ಕಾಲೇಜು ಯುವಕರು ಸಿಗರೇಟ್ ಸೇದುತ್ತಿದ್ದರು. ಇದರ ಬಗ್ಗೆ ಸಾರ್ವಜನಿಕರು ದೂರು ಕೊಟ್ಟಿದ್ದರು. ಜೊತೆಗೆ ಕಾಲೇಜಿನ ಗೋಡೆಗಳಲ್ಲಿ ಮೋದಿಯವರ ಅವಹೇಳನಕಾರಿ ಚಿತ್ರ ಬರೆದಿದ್ದರು. ಇದರ ಬಗ್ಗೆ ಚರ್ಚಿಸಲು ಮೊನ್ನೆ ಕಾಲೇಜಿಗೆ ಹೋಗಿದ್ದೆ. ಕಾಲೇಜಿನ ಮ್ಯಾನೇಜ್ಮೆಂಟ್ ಜೊತೆ ಮಾತುಕತೆ ನಡೆಸಿ ಇದನ್ನೆಲ್ಲ ಮಾಡದಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಅಂತ ಹೇಳಿ ಬಂದೆ. ಆದರೆ ನಮ್ಮ ಭೇಟಿ ವಿಚಾರದ ಬಗ್ಗೆ ಏನೇನೋ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಯ್ತು. ನಾವು ಕಾಲೇಜು ಯುವಕರಿಗೆ ಬೆದರಿಕೆ ಏನೂ ಹಾಕಲಿಲ್ಲ. ಕಾಲೇಜಿನ ವಿದ್ಯಾರ್ಥಿನಿಯರ ಉಡುಗೆ ಬಗ್ಗೆಯೂ ಮಾತಾಡಲಿಲ್ಲ. ಇದು ನನ್ನ ವಿರುದ್ಧ ಕಾಲೇಜಿನವರೇ ಮಾಡಿದ ಪಿತೂರಿ. ತಮ್ಮ ತಪ್ಪು ಮುಚ್ಚಿ ಹಾಕಲು ನನ್ನ ವಿರುದ್ಧ ವದಂತಿ ಹರಿಬಿಡಲಾಗಿದೆ. ಮೋದಿಯವರ ಚಿತ್ರ ಬಿಡಿಸಿ ಅವಮಾನ ಮಾಡಿದ ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ತುಮಕೂರು ರಸ್ತೆಯಲ್ಲಿ ಮೆಟ್ರೋ ಕಾಮಗಾರಿಗೆ ಸಂಬಂಧಿಸಿದಂತೆ ಅಂಚೆಪಾಳ್ಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಇಂದು ಸಭೆ ನಡೆಸಲಾಯಿತು. ಮೆಟ್ರೋ ರಸ್ತೆ ಬದಲಿಸುವ ಕುರಿತು ಬಿಎಂಆರ್ಸಿಎಲ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದರು.
ದಾಬಸ್ಪೇಟೆವರೆಗೂ ಮೆಟ್ರೋ ವಿಸ್ತರಿಸುವಂತೆ ಬಿಎಂಆರ್ಸಿಎಲ್ಗೆ ಮನವಿ ಮಾಡಲಾಗಿದೆ. ಅದರ ಜೊತೆಗೆ ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರಿಗಿನ ಮೆಟ್ರೋ ಕಾಮಗಾರಿಯನ್ನು ಶೀಘ್ರ ಮುಗಿಸಲು ತಿಳಿಸಿರುವುದಾಗಿ ಹೇಳಿದರು.