ಬೆಂಗಳೂರು: ಶ್ರೀರಂಗ ಏತ ನೀರಾವರಿ, ಸತ್ತೇಗಾಲ ಕುಡಿಯುವ ನೀರು ಯೋಜನೆ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳ ಪ್ರಗತಿ ಪರಿಶೀಲನೆ ಸಂಬಂಧ ಕರೆದಿದ್ದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ಶ್ರೀರಂಗ ಸೇರಿದಂತೆ ಹಲವು ಯೋಜನೆಗಳಿಗೆ ಭೂ ಸ್ವಾಧೀನದ ಸಮಸ್ಯೆ ಇದೆ. ಅದನ್ನು ತಕ್ಷಣ ಬಗೆಹರಿಸಲು ಸೂಚಿಸಿದ ಅವರು ಯಾವುದೇ ಕಾರಣಕ್ಕೂ ಕುಡಿಯುವ ಮತ್ತು ನೀರಾವರಿ ಯೋಜನೆಗಳು ವಿಳಂಬವಾಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂಬಂಧ ತುಮಕೂರು ಮತ್ತು ರಾಮನಗರ ಜಿಲ್ಲಾಧಿಕಾರಿಗಳ ಜತೆ ಸಭೆಗಳನ್ನು ನಡೆಸುವಂತೆಯೂ ಅವರು ಆದೇಶಿಸಿದರು.
ಮಾಗಡಿ ತಾಲೂಕಿಗೆ ಕುಡಿಯುವ ನೀರು ಸರಬರಾಜು ಮಾಡುವ ಶ್ರೀರಂಗ ಯೋಜನೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕೆನ್ನುವ ಕಟ್ಟಾಜ್ಞೆಯನ್ನೂ ಉಪ ಮುಖ್ಯಮಂತ್ರಿ ನೀಡಿದರು. ಇದಕ್ಕೆ ಮುಖ್ಯ ಎಂಜಿನಿಯರ್ ಬಾಲಕೃಷ್ಣ ಒಪ್ಪಿಗೆ ಸೂಚಿಸಿದರು. ಭೂ ಸ್ವಾಧೀನ ಪ್ರಕ್ರಿಯೆಗೆ ಎದುರಾಗಿರುವ ತೊಡಕುಗಳ ಬಗ್ಗೆ ಇನ್ನೊಂದು ವಾರದಲ್ಲಿ ಕಂದಾಯ ಇಲಾಖೆ ಜತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಸೂಚಿಸಿದರು.
ಅರ್ಕಾವತಿ ಜಲಾಶಯದ ಹಿನ್ನೀರಿನಿಂದ ಕನಕಪುರ ತಾಲೂಕಿನ ಗರಳಾಪುರ ಹಾಗೂ ಇನ್ನಿತರ 12 ಕೆರೆಗಳಿಗೆ ಎರಡು ಹಂತಗಳಲ್ಲಿ ನೀರು ತುಂಬಿಸಲು 70 ಕೋಟಿ ರೂ. ಖರ್ಚು ಮಾಡುತ್ತಿದ್ದು, ಇದಕ್ಕೂ ಭೂ ಸ್ವಾಧೀನದ ಸಮಸ್ಯೆ ಇದೆ. ತಕ್ಷಣ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಡಿಸಿಎಂ ಸಭೆಗೆ ತಿಳಿಸಿದರು.
ಒಟ್ಟು 540 ಕೋಟಿ ವೆಚ್ಚದ ಸತ್ತೇಗಾಲ ಕುಡಿಯುವ ನೀರು ಯೋಜನೆ ಪ್ರಗತಿಯಲ್ಲಿದ್ದು, ಇದರಿಂದ ಮೊಗೇನಹಳ್ಳಿ ಕೆರೆ ಮತ್ತು ಕಣ್ವ ಜಲಾಶಯಕ್ಕೆ ನೀರನ್ನು ತುಂಬಿಸಲಾಗುತ್ತದೆ. ಪುನಃ ಅಲ್ಲಿಂದ ಮಂಚನಬೆಲೆ ಜಲಾಶಯ ಮತ್ತು ವೈ.ಜಿ. ಗುಡ್ಡ ಕೆರೆಗೆ ತಂದು ಅದನ್ನು ನಾಲ್ಕು ತಾಲೂಕುಗಳಿಗೂ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಸದ್ಯದಲ್ಲೇ ಈ ಯೋಜನೆಯ ಪ್ರಗತಿಯನ್ನು ಖುದ್ದು ಪರಿಶೀಲಿಸಲಾಗುವುದು. ನೀರು ಸರಬರಾಜಿಗೆ ಸುರಂಗ ನಿರ್ಮಾಣ ಮಾಡುತ್ತಿದ್ದು, ಅದರ ಬಗ್ಗೆ ಡಿಸಿಎಂ ಮಾಹಿತಿ ಪಡೆದರು.
ಗರಕಹಳ್ಳಿ ಏತ ಯೋಜನೆ, ಸಾತನೂರು ಕೆರೆ ತುಂಬಿಸುವ ಯೋಜನೆ, ನಾರಾಯಪುರ ಕೆರೆ ತುಂಬಿಸುವ ಯೋಜನೆ, ಕೆಂಗೇರಿ ದೊಡ್ಡಬೆಲೆ ಏತ ಯೋಜನೆ, ಬೈರಮಂಗಲ ತಿರುವು ನಾಲಾ ಯೋಜನೆ, ಕಣ್ವ ನಾಲೆಗಳ ಆಧುನೀಕರಣ ಯೋಜನೆ, ಅರೆಕೊಪ್ಪ ಸೂಕ್ಷ್ಮ ನೀರಾವರಿ, ಹೆಗ್ಗನೂರು ಸೂಕ್ಷ್ಮ ನೀರಾವರಿ, ದೊಡ್ಡಾಲಹಳ್ಳಿ ಹನಿ ನೀರಾವರಿ ಯೋಜನೆಗಳ ಪ್ರಗತಿ ಬಗ್ಗೆಯೂ ನೀರಾವರಿ ನಿಗಮದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.