ಬೆಂಗಳೂರು: ಶ್ರೀಲಂಕಾ ಬಾಂಬ್ ಸ್ಫೋಟದ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿರುವುದಾಗಿ ಪೊಲೀಸ್ ಕಮೀಷನರ್ ಟಿ.ಸುನೀಲ್ ಕುಮಾರ್ ತಿಳಿಸಿದರು.
ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ ಶ್ರೀಲಂಕಾ ಸ್ಫೋಟದ ಉಗ್ರ ನ್ಯಾಷನಲ್ ತೌಹಿತ್ ಜಮಾತ್ ಸಂಘಟನೆಯ ಸದಸ್ಯನಾಗಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಕೇರಳ, ಚೆನ್ನೈ ಸೇರಿದಂತೆ ಬೆಂಗಳೂರಿಗೂ ಬಂದು ಹೋಗಿರುವ ಮಾಹಿತಿ ಇದೆ. ಆದ್ದರಿಂದ ಕಟ್ಟೆಚ್ಚರ ವಹಿಸುವಂತೆ ಬೆಂಗಳೂರು ಪೊಲೀಸರಿಗೂ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ನಡೆಸಲಾಗ್ತಿದ್ದು, ಅಪರಿಚಿತರ ಬಗ್ಗೆ ಎಚ್ಚರ ವಹಿಸಲಾಗಿದೆ .
ಸ್ಫೋಟದ ಬಳಿಕ ನಗರದ ಜನನಿಬಿಡ ಪ್ರದೇಶಗಳು, ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಭದ್ರತಾ ಕ್ರಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಈಟಿವಿ ಭಾರತ್ಗೆ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.