ಬೆಂಗಳೂರು : ನಾವು ಭಲಿಷ್ಠ ಭಾರತ ನಿರ್ಮಿಸಿದ್ದೆವು. ಇಂದು ನಮ್ಮ ಕಣ್ಣೆದುರೇ ಸರ್ವನಾಶ ಆಗುವುದನ್ನು ನೋಡಿದಾಗ ಬೇಸರ ಆಗುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ನಿಯಮ 68ರ ಅಡಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ವಿಪರೀತವಾಗಿದೆ. 171.24 ಮಿಲಿಯನ್ ಟನ್ ಕಚ್ಚಾ ತೈಲವನ್ನ ಯುಪಿಎ ಸರ್ಕಾರ ಆಮದು ಮಾಡಿಕೊಂಡಿತ್ತು. ಆದರೆ, ಅದು ಹೆಚ್ಚಾಗಿದೆ ಅಂದರೆ ಕೇಂದ್ರ ಎನ್ಡಿಎ ಸರ್ಕಾರ ಕಡಿಮೆ ಮಾಡಬಹುದಿತ್ತು. ಆದರೆ, 2019-20ರಲ್ಲಿ ಮಾಡಿಕೊಂಡ ಆಮದು ಹಿಂದಿಗಿಂತ ಹೆಚ್ಚಾಗಿತ್ತು. ಕಚ್ಚಾ ಇಂಧನ ಉತ್ಪಾದನೆ ಸಹ ಕಡಿಮೆ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಕೊಚ್ಚಿಯಲ್ಲಿ ಮಾತನಾಡಿ, ಇಂಧನ ಉತ್ಪಾದನೆ ಹೆಚ್ಚಿಸುತ್ತೇವೆ ಎಂದಿದ್ದರು. ಆದರೆ, ಆಗಿಲ್ಲ. ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಂಪನಿಯನ್ನು ಹರಾಜಿಗಿಡಲು ಸರ್ಕಾರ ಮುಂದಾಗಿದೆ. ಅಂಬಾನಿ ಕುಟುಂಬ, ದುಬೈನ ಕೆಲ ಶ್ರೀಮಂತ ಉದ್ಯಮಿಗಳು ಇವುಗಳನ್ನ ಖರೀದಿಸಲು ಮುಂದಾಗಿದ್ದಾರೆ.
ಇಂತಹ ಇಂಧನ ಕಂಪನಿಗಳನ್ನು ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ಮಾರಾಟಕ್ಕೆ ಮುಂದಾದರೆ ಹೇಗೆ? 8 ಬಂದರುಗಳ ಅದಾನಿಗೆ ಮಾರಾಟ ಮಾಡಲಾಗಿದೆ. ಉಳಿದವು ಮಾರಾಟವಾಗುತ್ತಿವೆ ಎಂದು ದೂರಿದರು.
ಕೃಷ್ಣಾ, ಗೋದಾವರಿ ನದಿ ತೀರದಲ್ಲಿ ದೊಡ್ಡ ಮಟ್ಟದ ತೈಲ ನಿಕ್ಷೇಪಗಳಿವೆ. ಅದರ ಮೇಲೆ ಅಂಬಾನಿ ಕಣ್ಣು ಬಿದ್ದಿದೆ. ಖಾಸಗಿ ಸಹಭಾಗಿತ್ವದಲ್ಲಿರುವ ಎಲ್ಲಾ ಸಂಸ್ಥೆ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿವೆ. ರೈತರ ಜಮೀನಿನ ಮೇಲೆ ಉಳ್ಳವರ ಕಣ್ಣು ಬೀಳುತ್ತಿದೆ. ಅವಶ್ಯ ವಸ್ತುಗಳ ಸಂಗ್ರಹ ನಿಯಂತ್ರಣಕ್ಕಿದ್ದ ಕಾನೂನು ತಿದ್ದುಪಡಿ ಮಾಡಲಾಗಿದೆ. ಇದರಿಂದ ಸಹಜವಾಗಿ ದೈನಂದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಾಗಿವೆ.
ಮಾಧ್ಯಮಗಳಲ್ಲಿ ಸಹ ಬೆಲೆ ಏರಿಕೆಯ ಆತಂಕದ ವಿವರ ಸಿಗುತ್ತದೆ. ಇಂಧ ಬೆಲೆ ಹೆಚ್ಚಳ ಭರಿಸಲಾಗದೆ 70 ಸಾವಿರ ವಾಹನಗಳು ಓಡಿಸಲಾಗದೆ ನಿಲ್ಲಲಿವೆ. ತೆರಿಗೆ ಇಳಿಕೆ ಮಾಡಿದರೆ ಅನುಕೂಲ. ಆಟೋ, ಕ್ಯಾಬ್ಗಳು ಲಕ್ಷಾಂತರ ಸಂಖ್ಯೆಯಲ್ಲಿ ನಿಂತಲ್ಲೇ ನಿಲ್ಲಲಿವೆ. ಜನ ಈಗ ಸುಮ್ಮನಿದ್ದಾರೆ.
ಯಾವಾಗ ತಮ್ಮ ಶಕ್ತಿ ತೋರಿಸುವ ಅವಕಾಶ ಸಿಗುವುದೋ ಅಂದು ಬಳಸಿಕೊಳ್ಳುತ್ತಾರೆ. ಏನಾದರೂ ದನಿ ಎತ್ತಿದರೆ ರಾಷ್ಟ್ರದ್ರೋಹದ ಆರೋಪ ಹೊರಿಸುತ್ತಾರೆ ಎಂದು ಅಂಜಿಕೆ ಪಡುತ್ತಿದ್ದಾರೆ. ಈ ಆಡಳಿತ ದೇಶಕ್ಕೆ ಮಾರಕ ಬೆಳವಣಿಗೆ. ದೇಶವನ್ನು ಸರ್ವನಾಶಕ್ಕೆ ಒಯ್ಯಬೇಡಿ ಎಂದು ಸಲಹೆ ನೀಡಿದರು.
ಕಾಲೆಳೆದ ಬಿಜೆಪಿ ಸದಸ್ಯರು : ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಬೆಲೆ ಏರಿಕೆ ಬೇಸರ ತಂದಿದೆ. ಆದರೆ, ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಮುಂದಿನ ದಿನಗಳಲ್ಲಿ ಬೆಲೆ ಇಳಿಕೆ ಆಗಲಿದೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ಸಂದರ್ಭ ಸಾವಿರಾರು ಕೋಟಿ ಮೊತ್ತದ ಸಾಲ ಇಂಧನ ಖರೀದಿ ಮಾಡಿದ್ದರು. ಅದನ್ನು ಬಿಜೆಪಿ ಸರ್ಕಾರ ತೀರಿಸಿದೆ. ಕಾಂಗ್ರೆಸ್ ಪಕ್ಷ ಮಾಡಿದ ಸಮಸ್ಯೆ ನಿವಾರಿಸಿದ್ದೇವೆ ಎಂದು ಹೇಳಿದಾಗ ಕಾಂಗ್ರೆಸ್ ಸದಸ್ಯರು ಸುಳ್ಳು, ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್. ಆರ್. ಪಾಟೀಲ್ ಬಗ್ಗೆ ಮಾತನಾಡಿದ ರವಿಕುಮಾರ್, ನೀವು ಹಿರಿಯರು, ಪಕ್ಷಕ್ಕಾಗಿ ದುಡಿದಿದ್ದೀರಿ. ನಿಮಗೆ ಸಿಗಬೇಕಾದ ಸಚಿವ ಸ್ಥಾನ ಸಿಕ್ಕಿಲ್ಲ. ನಮ್ಮಲ್ಲಿದ್ದರೆ ಉನ್ನತ ಸಚಿವ ಸ್ಥಾನ ಕಲ್ಪಿಸುತ್ತಿದ್ದೆವು ಎಂದರು. ಆಗ ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ಮಾತನಾಡಿ, ನಮ್ಮಿಂದ ಎಂತೆಂತವರನ್ನು ಕರೆದುಕೊಂಡು ಹೋಗಿ ಸಚಿವರನ್ನಾಗಿ ಮಾಡಿದ್ದೀರಿ ಎಂದರು. ಆಗ ಎಸ್ಆರ್ಪಿ ಮಾತನಾಡಿ, ನಮ್ಮಿಂದ ಹೋಗಿರುವ ಸದಸ್ಯರ ಜತೆ ನಾನೂ ಬರುತ್ತೇನೆ ಎಂದು ರವಿಕುಮಾರ್ ನಿರೀಕ್ಷಿಸಿದ್ದರು ಎಂದರು.