ಬೆಂಗಳೂರು: ಉದ್ವಿಘ್ನ ಸನ್ನಿವೇಶಗಳಲ್ಲಿ ಹಿರಿಯ ಅಧಿಕಾರಿಗಳ ಆದೇಶವಿದ್ದರೆ ಮಾತ್ರ ಲಾಠಿ ಪ್ರಹಾರಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ, ರಾಜ್ಯದಲ್ಲಿ ಪೊಲೀಸರು ಈಗ ನಡೆದುಕೊಳ್ಳುತ್ತಿರುವ ರೀತಿ ಖಂಡನೀಯ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ ಅವರು, ಲಾಕ್ಡೌನ್ ಜಾರಿ ಹೆಸರಿನಲ್ಲಿ ಪೊಲೀಸರು ಕೆಲವು ಕಡೆಗಳಲ್ಲಿ ಗೂಂಡಾಗಳಂತೆ ನಡೆದುಕೊಳ್ಳುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಬರುವ ಜನರನ್ನ ಅಮಾನವೀಯವಾಗಿ ಥಳಿಸಲಾಗುತ್ತಿದೆ. ಇದು ಅತ್ಯಂತ ಖಂಡನೀಯ. ಕಾನೂನು ಜಾರಿ ಮಾಡುವುದು ಎಂದರೆ ಅದು ಲಾಠಿಯಿಂದಲ್ಲ. ಐಪಿಸಿಯ ಯಾವ ಸೆಕ್ಷನ್ ನಲ್ಲಿ ಸಾರ್ವಜನಿಕರಿಗೆ ಪೊಲೀಸರು ಹೊಡೆಯಬಹುದು ಎಂದಿದೆ. ಪೊಲೀಸ್ ಮ್ಯಾನ್ಯುಯಲ್ ನಲ್ಲಾಗಲೀ, ಸಿಆರ್ಪಿಸಿ ಸೆಕ್ಷನ್ನಲ್ಲಾಗಲಿ ಪೊಲೀಸರು ಸಾರ್ವಜನಿಕರ ಮೇಲೆ ಲಾಠಿ ಬಳಸಬಹುದು ಅನ್ನೋ ನಿಯಮ ಇದೆಯಾ..? ಎಂದು ಕೇಳಿದ್ದಾರೆ.
ಲಾಠಿ ಪ್ರಹಾರಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ:
ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಹಲ್ಲೆ ಮಾಡುವ ಬದಲು, ವಾಹನಗಳನ್ನು ಕಾನೂನು ಪ್ರಕಾರ ಸೀಜ್ ಮಾಡಲಿ. ಪೊಲೀಸರಿಗೆ ಲಾಠಿ ಕೊಟ್ಟಿರುವುದು ಜನ ಮೇಲೆ ದೌರ್ಜನ್ಯ ಮಾಡಲು ಅಲ್ಲ, ಆತ್ಮರಕ್ಷಣೆಗಾಗಿ. ಲಾಠಿ ಬಳಸಬೇಕು ಇಲ್ಲವೇ ಉದ್ವಿಘ್ನ ಸನ್ನಿವೇಶಗಳಲ್ಲಿ ಹಿರಿಯ ಅಧಿಕಾರಿಗಳ ಆದೇಶವಿದ್ದರೆ ಮಾತ್ರ ಲಾಠಿ ಪ್ರಹಾರಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಪೊಲೀಸರ ಬಳಿ ಲಾಠಿಯ ಜತೆಗೆ ಬಂದೂಕು, ರಿವಾಲ್ವರ್ ಅನ್ನೂ ಕೊಡಲಾಗಿದೆ. ಹಾಗಂತ ಜನರ ಮೇಲೆ ಫೈರ್ ಮಾಡಲು ಸಾಧ್ಯವೇ..? ಕಾನೂನು ಜಾರಿ ಮಾಡಬೇಕಾದ ಪೊಲೀಸರು ಮನವೀಯತೆ ಮರೆತು ಕೆಲಸ ಮಾಡುವುದು ಪ್ರಜಾಪ್ರಭುತ್ವದ ನಿಯಮಗಳಿಗೆ ವಿರುದ್ಧ ಎಂದರು.
ಅವಶ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ನೀಡಿ, ಮನೆಗಳಿಂದ ಹೊರಬರುವ ಜನರಿಗೆ ಲಾಠಿ ಚಾರ್ಜ್ ಮಾಡುವಂತೆ ಸರ್ಕಾರ ಆದೇಶ ಮಾಡಿದೆಯೇ ಎಂದು ಎಸ್ಆರ್ಪಿ ಪ್ರಶ್ನಿಸಿದರು,
ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಬಂದವರ ಮೇಲೆ ಸಾರ್ವಜನಿಕವಾಗಿ ಪೊಲೀಸರು ದೌರ್ಜನ್ಯ ನಡೆಸಿದರೆ ಹೇಗೆ..? ರಾಜ್ಯದಲ್ಲಿ ಪ್ರಜಾಪ್ರಭುತ್ವದ ಸರ್ಕಾರ ಅಧಿಕಾರದಲ್ಲಿದೆಯೋ ಅಥವಾ ಇದು ಪೊಲೀಸ್ ರಾಜ್ಯವೋ..? ಸರ್ಕಾರದ ಲಾಕ್ ಡೌನ್ ಮಾರ್ಗಸೂಚಿ ಪ್ರಕಾರ ಕೆಲವೊಂದು ವಲಯಗಳಿಗೆ ವಿನಾಯಿತಿ ನೀಡಲಾಗಿದೆ. ಆಸ್ಪತ್ರೆ, ಮೆಡಿಕಲ್ಸ್, ಸರ್ಕಾರಿ ನೌಕರರು, ಬ್ಯಾಂಕ್ ಉದ್ಯೋಗಿಗಳು, ಉತ್ಪಾದನಾ ವಲಯದ ಕಂಪನಿಗಳಿಗೆ ಅವಕಾಶ ನೀಡಲಾಗಿದೆ. ಈ ನೌಕರರು ಕೆಲಸಕ್ಕೆಂದು ಹೊರ ಬಂದಾಗ ಪೊಲೀಸರು ಮಾನವೀಯತೆ ಮರೆತು ಗೂಂಡಾಗಳಂತೆ ವರ್ತಿಸುತ್ತಿರುವುದೇಕೆ..? ಎಂದು ಕೇಳಿದ್ದಾರೆ.
ಪೋಲಿಸರು ಗೂಂಡಾಗಳು ಕೆಲವು ಕಡೆಗಳಲ್ಲಂತೂ ಪೊಲೀಸರು ಅಕ್ಷರಶಃ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ರಕ್ತ ಬರುವಂತೆ ಸಾರ್ವಜಕನಿಕರ ಮೇಲೆ ಹಲ್ಲೆಯಾಗುತ್ತಿದೆ. ಮಹಿಳೆಯರೂ ಎಂಬುದನ್ನೂ ನೋಡದೇ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಇದು ಕಟ್ಟು ನಿಟ್ಟಿನ ಲಾಕ್ಡೌನಾ..? ಅಥವಾ ಲಾಠಿಚಾರ್ಜ್ ಲಾಕ್ ಡೌನಾ..? ಬಿಜೆಪಿ ಸರ್ಕಾರವೇ ಉತ್ತರಿಸಬೇಕು. ಜನ ಯಾಕೆ ಹೊರಗೆ ಬಂದಿದ್ದಾರೆ ಎಂದು ವಿಚಾರಿಸದೇ, ಗುರುತಿನ ಚೀಟಿಗಳನ್ನು ಪರಿಶೀಲಿಸದೇ ಏಕಾಏಕಿ ಲಾಠಿ ಬೀಸುವ ವರ್ತನೆ ಅತಿರೇಕದ್ದು. ಅತ್ಯಗತ್ಯವಾಗಿ ಸಂಚಾರ ಮಾಡಲೇಬೇಕಾದವರ ಮೇಲೆ ನಿರ್ದಯವಾಗಿ ಲಾಠಿ ಪ್ರಹಾರ ಮಾಡುತ್ತಿರುವುದು ಸರಿಯಲ್ಲ. ಹಿರಿಯರು, ಮಹಿಳೆಯರೂ ಎಂಬುದನ್ನೂ ನೋಡದೇ ಲಾಠಿ ಬೀಸಲಾಗುತ್ತಿದೆ. ಪೊಲೀಸರೇ ಮನುಷ್ಯರಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ.
ಲಾಠಿ ಪ್ರಹಾರಕ್ಕೆ ಅರ್ಥವಿಲ್ಲ:
ಪುಂಡರನ್ನು ಥಳಿಸಿಪೊಲೀಸರ ಲಾಠಿ ಪ್ರಹಾರಕ್ಕೆ ಅರ್ಥವೇ ಇಲ್ಲ, ಲಾಠಿ ಬೀಸಬೇಕಾದದ್ದು ಸುಖಾ ಸುಮ್ಮನೆ ಬೀದಿಗಳಲ್ಲಿ ಸುತ್ತಾಡುವ ಪುಂಡರ ಮೇಲೆ. ಅದನ್ನು ಬಿಟ್ಟು ತುರ್ತು ಕೆಲಸಕ್ಕೆ ಹೊರಬಂದವರು, ಉದ್ಯೋಗಕ್ಕೆ ಹೋಗುತ್ತಿರುವವರು, ಅಗತ್ಯ ವಸ್ತುಗಳ ಖರೀದಿಗೆ ಬಂದವರ ಮೇಲಲ್ಲ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ಪೊಲೀಸರಿಗೆ ಜನಸ್ನೇಹಿಯಾಗಿರುವುದನ್ನು ಹೇಳಿಕೊಡಿ. ಪೊಲೀಸರು ನಾಗರೀಕರನ್ನು ವಿಶ್ವಾಸಕ್ಕೆ ಪಡೆದು ನಂತರ ಕಾನೂನು ಜಾರಿ ಮಾಡಬೇಕು. ಪೊಲೀಸರು ಜನರ ಬಳಿ ಸಂವೇದನೆಯಿಂದ ವರ್ತಿಸದಿದ್ದರೆ ಜನ ಪೊಲೀಸರ ವಿರುದ್ಧವೇ ತಿರುಗಿಬಿದ್ದರೂ ಆಶ್ಚರ್ಯವಿಲ್ಲ. ಲಾಕ್ ಡೌನ್ ಹೆಸರಲ್ಲಿ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕು ಎಂದು ಸಚಿವ ಬಸವರಾಜ ಬೊಮ್ಮಾಯಿ ಡಿಜಿಪಿ ಹಾಗೂ ಬೆಂಗಳೂರು ಪೊಲೀಸ್ ಮಹಾನಿರ್ದೇಶಕರನ್ನು ಒತ್ತಾಯಿಸುತ್ತೇನೆ ಎಂದರು.
ಮೂರ್ಖತನದ ಆದೇಶ:
ರಾಜ್ಯ ಸರ್ಕಾರ ಜಾರಿ ಮಾಡಿರುವ ಲಾಕ್ಡೌನ್ ಮಾರ್ಗಸೂಚಿ ಪ್ರಕಾರ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ನೀಡಲಾಗಿದೆ. ಆದರೆ ಈ ಅವಧಿಯಲ್ಲಿ ವಾಹನಗಳನ್ನು ಬಳಸುವಂತಿಲ್ಲ ಎಂದು ಸರ್ಕಾರ ಆದೇಶ ಮಾಡಿದೆ. ಸರ್ಕಾರದ ಈ ಆದೇಶ ಮೂರ್ಖತನದ ನಿರ್ಧಾರವಲ್ಲದೇ ಮತ್ತೇನೂ ಅಲ್ಲ. ನಗರ ಪ್ರದೇಶಗಳಲ್ಲಿ ಮನೆಗಳಿಗೆ ದಿನಸಿ ವಸ್ತುಗಳನ್ನು ಜನ ಹೊತ್ತುಕೊಂಡೇ ಹೋಗಲು ಸಾಧ್ಯವಾ? 20ಲೀಟರ್ ಫಿಲ್ಟರ್ ನೀರಿನ ಕ್ಯಾನ್ ಅನ್ನು ವಾಹನದ ಸಹಾಯವಿಲ್ಲದೇ ಹೊತ್ತು ತರಲಾಗುತ್ತದೆಯೇ? ಈ ಬಿಜೆಪಿ ಸರ್ಕಾರಕ್ಕೆ ಅದ್ಯಾವ ತಲೆಕೆಟ್ಟ ಮನುಷ್ಯ ಸಲಹೆ ಕೊಡುತ್ತಿದ್ದಾನೋ ಗೊತ್ತಿಲ್ಲ.ಇದಕ್ಕಿಂತ ತುಘುಲಕ್ ಆಡಳಿತವೇ ಚೆನ್ನಾಗಿತ್ತು ಎನಿಸುತ್ತದೆ. ಈ ಸರ್ಕಾರಕ್ಕೆ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿಯ ಅರಿವೇ ಇಲ್ಲ. ಹಳ್ಳಿಗಳಲ್ಲಿ ಅಂಗಡಿ ಮುಂಗಟ್ಟುಗಳು ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿರುತ್ತವೆ. ಅಷ್ಟು ದೂರದಿಂದ ಮನೆಯವರೆಗೆ ವಾಹನ ಬಳಸದೇ ಹೊತ್ತುಕೊಂಡು ಬರಲು ಸಾಧ್ಯವಾ..? ಅಧಿಕಾರ ನಡೆಸುವವರಿಗೆ ಇಂಥಾ ಕನಿಷ್ಠ ಜ್ಞಾನವಾದರೂ ಬೇಡವೇ ಎಂದು ಪ್ರಶ್ನಿಸಿದ್ದಾರೆ.
ಬೇಕಾಬಿಟ್ಟಿ ನಿಯಮಗಳು:
ವಾಹನ ಬಳಸುವಂತಿಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಕೃಷಿಗೆ ಅಗತ್ಯವಾಗಿಬೇಕಾದ ಗೊಬ್ಬರ, ರಾಸಾಯನಿಕ, ಕೃಷಿ ಯಂತ್ರ ಇತ್ಯಾದಿಗಳನ್ನು ರೈತರು ನಡೆದುಕೊಂಡು ಹೋಗಿಯೇ ತರಬೇಕಾ? ರೈತರು ಬ್ಯಾಂಕ್ಗಳಿಗೆ ಹೋಗಬೇಕಾದರೂ ವಾಹನಗಳನ್ನು ಬಳಸುವಂತಿಲ್ಲ ಎಂದರೆ ಹೇಗೆ? ಲಾಕ್ ಡೌನ್ ಮಾರ್ಗಸೂಚಿ ಮಾಡುವ ಅಧಿಕಾರಿಗಳಿಗೆ ಕನಿಷ್ಠ ಪ್ರಜ್ಞೆಯಾದರೂ ಇರಬೇಕು. ಅಧಿಕಾರಿಗಳು ಕೊಟ್ಟ ಮಾರ್ಗಸೂಚಿಗೆ ಒಪ್ಪಿಗೆ ಕೊಡುವ ಸರ್ಕಾರವಾದರೂ ಯೋಚನೆ ಮಾಡಬೇಕಲ್ಲವೇ? ಬೇಕಾಬಿಟ್ಟಿ ನಿಯಮಗಳನ್ನು ಮಾಡುವ ಮೊದಲು ವಾಸ್ತವ ಸ್ಥಿತಿಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಿಯಮಗಳನ್ನು ಜಾರಿ ಮಾಡುವಾಗ ಸರ್ಕಾರ ಸಾಧಕ ಬಾಧಕಗಳ ಬಗ್ಗೆ ಮೊದಲು ಯೋಚನೆ ಮಾಡಬೇಕು. ಬಿಜೆಪಿ ಸರ್ಕಾರ ಈ ಕೂಡಲೇ ಈ ಗೊಂದಲಕಾರಿ ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕು. ಅಗತ್ಯ ವಸ್ತುಗಳ ಖರೀದಿಸಲು ಜನರಿಗೆ ಸ್ವಂತ ವಾಹನ ಬಳಸಲು ಅನುಮತಿಸಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.